

ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಸಾಂಸ್ಕೃತಿಕ ಭವನ ಸಾರ್ವಜನಿಕರ ಉಪಯೋಗಕ್ಕೆ ಕನಿಷ್ಠ ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರಗೆ ಗುರುವಾರ ಮನವಿ ಸಲ್ಲಿಸಿದರು.
ಸಾಂಸ್ಕೃತಿಕ ಭವನ ಒಂದು ದಿನಕ್ಕೆ ಬಾಡಿಗೆ 10 ಸಾವಿರ ಮತ್ತು ನಿರ್ವಹಣೆಗೆ 2 ಸಾವಿರ ಸೇರಿ ಒಟ್ಟು 12 ಸಾವಿರ ರೂ. ನಿಗದಿ ಮಾಡಲಾಗಿದೆ. ಭವನದಲ್ಲಿ ಆಸನ, ಅಡುಗೆ ಸಾಮಗ್ರಿ ಕೂಡ ಇಲ್ಲ. ಈಂಥ ಭವನಕ್ಕೆ ಇಷ್ಟೊಂದು ಬಾಡಿಗೆ ನಿಗದಿ ಮಾಡಿದ್ದರಿಂದ ಬಡವರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಬಾಡಿಗೆ, ನಿರ್ವಹಣೆ ಸೇರಿ 2 ರಿಂದ 3 ಸಾವಿರ ರೂ.ಗೆ ಇಳಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕಾರ್ಯಕರ್ತರಾದ ಜಮೀರ್ ಖಾನ್, ಅಲ್ಲಾವುದ್ದಿನ್ ಬಾಬಾ, ಹನುಮಂತ ಭಜಂತ್ರಿ, ಅಮೀನ್ ಗೌಳಿಪುರ, ನಿರುಪಾದಿ ಹಿರೇಮಠ, ಇರ್ಫಾನ್ ಚೌಧರಿ, ಅಜ್ಮೀರ್, ವೆಂಕಟೇಶ, ಸಲ್ಮಾನ್ ಖಾನ್ ಇತರರು ಇದ್ದರು.