

ಲಿಂಗಸುಗೂರು: ರೈತರ ಜಮೀನುಗಳ ಪಹಣಿಗಳಿಗೆ ಫಾರ್ಮ್ ನಂ.10 ಮಾಡಿಕೊಡಲು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಐ(ಎಂಎಲ್) ಮತ್ತು ಕೆಆರ್‌ಎಸ್ ಸಂಘಟನೆ ಪದಾಧಿಕಾರಿಗಳು ಇಲ್ಲಿನ ತಹಸಿಲ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿ ತಹಸೀಲ್ದಾರ್ ಶಂಶಾಲಂಗೆ ಮನವಿ ಸಲ್ಲಿಸಿದರು.
ಗುರುಗುಂಟಾ ಹೋಬಳಿ ವ್ಯಾಪ್ತಿಯ ಕೆಲ ಹಳ್ಳಿಗಳ ರೈತರು 2020ರಲ್ಲಿ ಪಹಣಿಗಳಿಗೆ ಫಾರ್ಮ್ ನಂ-10 ಮಾಡಿಕೊಡಲು ಅಗತ್ಯ ದಾಖಲೆಯೊಂದಿಗೆ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ್ಲ. ರೈತರ ಅರ್ಜಿಗಳಿಗೆ ಬಿಡಿಗಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು, ಭೂ ಮಾಪನಾ ಇಲಾಖೆಯಲ್ಲಿ ಭೂಮಿ ಸರ್ವೇಗೆ ರೈತರು ಅರ್ಜಿ ಸಲ್ಲಿಸಿದರೆ ಜಮೀನಿನ ಟಿಪ್ಪಣಿ, ಇತರ ದಾಖಲೆಗಳಿಲ್ಲ ಮತ್ತು ಸರ್ವೇ ನಂ.ಹಿಸ್ಸಾ ಅದಲು-ಬದಲಾಗಿವೆ ಎಂಬ ಸಬೂಬು ಹೇಳುತ್ತಾರೆ. ಹಣ ನೀಡುವ ಶ್ರೀಮಂತರಿಗೆ ಬೇಗನೆ ಕೆಲಸ ಮಾಡಿಕೊಡುತ್ತಾರೆ ಎಂದು ಧರಣಿನಿರತರು ಆರೋಪಿಸಿದರು.
ಸರ್ಕಾರ ಭೂಮಿಯ ತೆರಿಗೆ ಹೆಚ್ಚಿಸಿದ್ದು, ಸರ್ವೇಗೆ ಅರ್ಜಿ ಸಲ್ಲಿಸಿದರೆ ಸಾವಿರಾರು ಹಣ ಭರಿಸಬೇಕು. ಭೂ ಮಾಪನಾ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದನ್ನು ಪ್ರಶ್ನಿಸುವ ರೈತರಿಗೆ ಜಮೀನು ಸರ್ವೇ ಮಾಡುತ್ತಿಲ್ಲ. ಕೂಡಲೇ ರೈತರ ಪಹಣಿಗಳಿಗೆ ಫಾರ್ಮ್ ನಂ.10 ಮಾಡಿಕೊಡಬೇಕು ಮತ್ತು ಭೂ ಮಾಪನಾ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.