

ಲಿಂಗಸುಗೂರು: ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಛಲವಾದಿ ಸಮುದಾಯಕ್ಕೆ ಸಂವಿಧಾನದತ್ತ ಮೀಸಲಾತಿ ಲಭಿಸಿದ್ದರೂ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲ. ಛಲವಾದಿ ಸಮುದಾಯ ಸಂಘಟಿತರಾಗಿ ಹೋರಾಟ ನಡೆಸಿದಾಗ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವೆಂದು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಸಮಾವೇಶ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ರಾಜ್ಯದಲ್ಲಿ 1.08 ಕೋಟಿ ಜನಸಂಖ್ಯೆ ಹೊಂದಿರುವ ಛಲವಾದಿ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿತ್ವದ ಕನಸು ನನಸಾಗಬೇಕಾದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅತಿಮುಖ್ಯವಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಛಲವಾದಿ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಲು ಸಮರ್ಥರಿದ್ದರೂ ಕಡೆಗಣಿಸಲಾಗಿದೆ. ರಾಜ್ಯದಲ್ಲಿ 36 ಮೀಸಲು ಕ್ಷೇತ್ರಗಳಿದ್ದು, 14 ಕ್ಷೇತ್ರಗಳಲ್ಲಿ ಮಾತ್ರ ದಲಿತರು ಆಯ್ಕೆಯಾಗಿದ್ದಾರೆ. ಪಕ್ಷಭೇದ ಮರೆತು ಸಂಘಟಿತರಾಗಬೇಕು ಎಂದರು.