ಬಿಇಒ ಮೇಲೆ ಹಲ್ಲೆ, ಕ್ರಮಕ್ಕೆ ಎಸ್‌ಎಫ್‌ಐ ಒತ್ತಾಯ

BEO
Published on

ಲಿಂಗಸುಗೂರು: ದೇವದುರ್ಗ ಬಿಇಒ ಸುಖದೇವ್ ಮೇಲೆ ಹಲ್ಲೆ ನಡೆಸಿದ ಖಾಸಗಿ ಶಾಲಾ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆ ಮುಖಂಡರು ಪಟ್ಟಣದಲ್ಲಿ ಎಸಿ ಅವಿನಾಶ ಶಿಂಧೆಗೆ ಸೋಮವಾರ ಮನವಿ ಸಲ್ಲಿಸಿದರು.

ಜಾಲಹಳ್ಳಿಯ ಖಾಸಗಿ ಶಾಲೆಯಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ನಿಯಮ ಉಲ್ಲಂಘಿಸಿ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಸಂಘಟನೆಯಿಂದ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಬಿಇಒ ಸುಖದೇವ್, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.

ಜೂ.23ರಂದು ಜೆ.ಜೆ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಶಿಕ್ಷಕರು ಮತ್ತು ಬಿಸಿಯೂಟ ನೌಕರರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರಕ್ಕೆ ಆಮಿಸಿದ ವೇಳೆ ಭಾಗ್ಯವಂತಿ ಶಾಲೆಯ ಮುಖ್ಯಸ್ಥ ಶರಣು ಹುಣಸಗಿ, ಗಾಣದಾಳದ ನಕ್ಷತ್ರ ಪೂರ್ವ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥ ಬಸವರಾಜ ಪಾಟೀಲ್ ಏಕಾಏಕಿ ಸಭೆಗೆ ನುಗ್ಗಿ ಮಕ್ಕಳು ಮತ್ತು ಪಾಲಕರ ಎದುರೇ ಬಿಇಒ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಈ ಕುರಿತು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಶಾಲೆಯ ಮಾನ್ಯತೆ ರದ್ದಪಡಿಸಬೇಕು. ಗೂಂಡಾಗಿರಿ ತೋರಿದವರನ್ನು ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net