

ಲಿಂಗಸುಗೂರು: ತಾಲೂಕಿನ ಐದಬಾವಿ ಗ್ರಾಮದಲ್ಲಿ 14 ವರ್ಷಗಳ ಹಿಂದಿನ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ಪೀಠಾಸಿನ ಲಿಂಗಸುಗೂರು ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ ಜಕಾತಿ ಅವರು ಕೊಲೆ ಆರೋಪ ಸಾಬೀತಾದ ಲಕ್ಷ್ಮಣ ಸೇರಿ 18 ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ತಲಾ 5500 ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಐದಬಾವಿ ಗ್ರಾಮದಲ್ಲಿ 2010ರ ಸೆ.06 ರಂದು ದುರಗಮ್ಮ ದೇವಿ ಜಾತ್ರೆಯ ವೀಕ್ಷಿಸುತ್ತಿದ್ದ ಶರಣಪ್ಪ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಲಿಂಗಸುಗೂರು ಠಾಣೆಯ ಅಂದಿನ ತನಿಖಾಧಿಕಾರಿಗಳಾದ ಸಿಪಿಐ ಪ್ರಭುಗೌಡ ಹಾಗೂ ಸಿಪಿಐ ಜಿ.ಆರ್.ಶಿವಮೂರ್ತಿ ಪ್ರಕರಣ ದಾಖಲಿಸಿ ಕೈಗೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ಪೀಠಾಸಿನ ಲಿಂಗಸುಗೂರು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೋಪಾಲರಾವ್ ರಾಯಚೂರು ವಾದ ಮಂಡಿಸಿದರು.