

ಲಿಂಗಸುಗೂರು: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುರಿ ಇಟ್ಟುಕೊಳ್ಳಬೇಕು ಮತ್ತು ಅದರಷ್ಟೇ ಪರಿಶ್ರಮ ಪಡಬೇಕು. ಸಾಧಕರ ಆದರ್ಶ ಮೈಗೂಡಿಸಿಕೊಂಡು ಯಶಸ್ಸು ಸಾಧಿಸಲು ಗಮನ ಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು. ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಹೆಚ್ಚುವರಿ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಸಭಾಂಗಣ ಉದ್ಘಾಟಿಸಿ ಮಾತನಾಡಿದರು. ಸಾಧನೆ ಕೇವಲ ಕಾಲೇಜು, ಪಟ್ಟಣಕ್ಕೆ ಸೀಮಿತವಾಗದೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಬಡವ, ಬಲ್ಲಿದ ಎಂಬ ಭೇದ-ಭಾವವಿಲ್ಲದೆ ಶಿಕ್ಷಣ ದೊರಕಬೇಕು. ಸರ್ಕಾರವು ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಶಿಕ್ಷಣ ಮೇಲಿನ ಕಾಳಜಿಯಿಂದ ಶಾಸಕ ಡಿ.ಎಸ್.ಹೂಲಗೇರಿ ಸಾಕಷ್ಟು ಅನುದಾನ ತಂದಿದ್ದಾರೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಿ ಉನ್ನತ ಸ್ಥಾನಮಾನ ಹೊಂದುವ ಮೂಲಕ ಕೀರ್ತಿವಂತರಾಗಬೇಕೆಂದರು. ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ.ಎಸ್.ಹೂಲಗೇರಿ, ಎಸ್ಪಿ ಬಿ.ನಿಖಿಲ್, ಎಸಿ ರಾಹುಲ್ ಸುಂಕನೂರು, ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ಇದ್ದರು.