ಮಹಾಭಾರತ ನೈಜ ಘಟನೆ ಆಧಾರಿತ

Lingasugur Vyasa Praneets mahabharat
ಲಿಂಗಸುಗೂರು ವಿವಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವ್ಯಾಸ ಪ್ರಣೀತ ಆನ್ವಯಿಕ ಮಹಾಭಾರತ ಒಂದು ಚಿಂತನ ಮಂಥನ ಕಾರ್ಯಕ್ರಮವನ್ನು ವಿದ್ವಾನ್ ಜಗದೀಶ ಶರ್ಮಾ ಉದ್ಘಾಟಿಸಿದರು. ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು, ಬಾಗಲಕೋಟೆ ನಾಗಸಂಪಿಗೆಯ ವಿದ್ವಾನ್ ಬಿಂದುಮಾಧವಾಚಾರ್ಯರು, ಮಾಜಿ ಸಚಿವ ಹಾಗೂ ವಿವಿ ಸಂಘದ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರತಿಷ್ಠಾನದ ಸಂಚಾಲಕ ಬಸವಂತರಾಯ ಕುರಿ ಇದ್ದರು.
Published on

ಲಿಂಗಸುಗೂರು: ಮಹಾಭಾರತ ಅತ್ಯಂತ ಪ್ರಾಚೀನ ಕೃತಿಯಾಗಿದೆ ಎಂದು ವಿದ್ವಾನ್ ಜಗದೀಶ ಶರ್ಮಾ ಹೇಳಿದರು.

ಪಟ್ಟಣದ ವಿವಿ ಸಂಘದ ಆವರಣದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಮತ್ತು ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವ್ಯಾಸ ಪ್ರಣೀತ ಆನ್ವಯಿಕ ಮಹಾಭಾರತ ಒಂದು ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಐದು ಸಾವಿರ ವರ್ಷಗಳ ಹಿಂದೆ ರಚನೆಗೊಂಡ ಕೃತಿಗೆ ಮಹಾಭಾರತ ಹೆಸರು ಬರಲು ಕಾರಣಗಳು ಬಹಳಷ್ಟಿವೆ. ಭರತ ವಂಶೀಯರ ಚರಿತ್ರೆಯಿಂದ ಈ ಹೆಸರು ಬಂದಿದೆ ಎಂಬುದು ಮೇಲ್ನೋಟಕ್ಕೆ ಕಂಡರೂ ಭಾರತದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ತಪ್ಪು ಒಪ್ಪುಗಳ ಚರಿತ್ರೆ ಎಂದು ಒಳಹೊಕ್ಕು ನೋಡಿದಾಗ ನಿಜವಾದ ಅರ್ಥ ನಮಗೆ ತಿಳಿಯಲಿದೆ.

ಮಹಾಭಾರತ ಕೇವಲ ಕಾಲ್ಪನಿಕ ಕೃತಿ ಎಂಬ ಜಿಜ್ಞಾಸೆಗಳೂ ಕೆಲವರಲ್ಲಿವೆ. ಆದರೆ ಇತಿಹಾಸ ತಜ್ಞರ ಅನ್ವೇಷಣೆಯಿಂದ ಐದು ಸಾವಿರ ವರ್ಷಗಳ ಹಿಂದೆ ನಡೆದ ಘಟನೆ ಎಂದು ಸಾಕ್ಷೀಕರಿಸಿದ್ದಾರೆ. ಮಹಾಭಾರತ ಕೃತಿಯ ಒಳ ಹೊರಗಿನ ಸಾಕ್ಷಿಗಳು ಗಮನಿಸಿದರೆ ಇದು ನಡೆದ ನೈಜ ಘಟನೆಯಾಗಿದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಹಾಭಾರತ ನಡೆದ ಘಟನೆಗಳ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ. ಹಸ್ತಿನಾಪುರ, ಇಂದ್ರಪ್ರಸ್ಥ, ಖಾಂಡವಪ್ರಸ್ಥ, ಕುರುಕ್ಷೇತ್ರ ಹೀಗೆ ಅನೇಕ ಹೆಸರುಗಳು ಮತ್ತು ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ ಎಂದು ಮಾಹಿತಿ ನೀಡಿದರು.

ವ್ಯಾಸನೆಂಬ ಕೃತಿಕಾರ ಬರೆದ ಕೃತಿ ನಾವು ಒಪ್ಪಿಕೊಂಡರೂ ಮಹಾಭಾರತ ಈ ದೇಶದ ಚರಿತ್ರೆಯೇ ಆಗಿದೆ. ಯಾವುದೇ ಒಂದು ಸಾಹಿತ್ಯ ಆಯಾ ಕಾಲಮಾನದ್ದೇ ಆಗಿರುತ್ತದೆ. ಸಾವಿರಾರು ವರ್ಷಗಳ ಹಿಂದಿನ ಜೀವಿಸುವವರ ಜೀವನ ಶೈಲಿ, ನಡೆ, ನುಡಿ, ಆಚರಣೆ, ಪ್ರತಿಕ್ರಿಯೆ, ಎದುರಿಸಿದ ಸವಾಲುಗಳು, ಸಮಸ್ಯೆಗಳನ್ನು ಸ್ವೀಕರಿಸಿದ ವಿಧಾನ ಮತ್ತು ತಪ್ಪು ಒಪ್ಪುಗಳ ಪರಿಣಾಮ ಅವರ ಬದುಕಿನ ಮೇಲೆ ಯಾವ ಪರಿಣಾಮ ಬೀರಿತು ಮತ್ತು ಅವರ ನಡೆ ಆ ಸಮೂಹದ ಮೇಲೆ ಯಾವ ರೀತಿ ಪ್ರಭಾವಬೀರಿತು ಎಂಬುದನ್ನು ಗಮನಿಸಿದರೆ ಮಹಾಭಾರತ ನಿಜವಾದ ಇತಿಹಾಸವೆಂದು ಭಾವಿಸಬೇಕಾಗುತ್ತದೆ ಎಂದರು.

ಐದು ಸಾವಿರ ವರ್ಷಗಳ ಹಿಂದೆ ನಡೆದ ಘಟನೆಗಳು ಇಂದಿಗೂ ಜೀವಂತವಾಗಿವೆ. ಇಡಿ ಸಂಸ್ಕೃತಿ, ಪುರುಷ ಲೋಕ, ಶಿಕ್ಷಕ ಲೋಕ, ಉನ್ನತ ಸ್ಥರದಲ್ಲಿದ್ದವರು ನಡೆದುಕೊಂಡ ರೀತಿ ನೀತಿಗಳು ಇಂದಿಗೂ ಪ್ರಶ್ನಿಸಲಾಗುತ್ತಿದೆ. ಅಂದರೆ ಇಂದಿಗೂ ಒಂದಿಲ್ಲೊಂದು ರೀತಿಯಲ್ಲಿ ಮಹಾಭಾರತವೇ ನಡೆಯುತ್ತಿದೆ ಎಂದು ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net