

ಲಿಂಗಸುಗೂರು: ಪಟ್ಟಣದ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯ ಗೂಡಂಗಡಿಗಳನ್ನು ಎರಡು ದಿನದೊಳಗೆ ತೆರವುಗೊಳಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ರವಿ ಸಿರುಗುಪ್ಪ ಗಡುವು ನೀಡಿದರು.
ಪಟ್ಟಣದ ಬಸ್ ನಿಲ್ದಾಣ ವೃತ್ತ, ಬೈಪಾಸ್ ರಸ್ತೆ ಸೇರಿ ವಿವಿಧೆಡೆ ಬುಧವಾರ ಬೆಳಗ್ಗೆ ಸಂಚರಿಸಿದ ಮುಖ್ಯಾಧಿಕಾರಿ ಅವರು, ಗೂಡಂಗಡಿ, ಡಬ್ಬಾ ಅಂಗಡಿಗಳ ಮಾಲೀಕರಿಗೆ ತೆರವುಗೊಳಿಸುವಂತೆ ಸೂಚಿಸಿದರು. ಕೆಲ ಸಮಯದ ಬಳಿಕ ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪುರಸಭೆಗೆ ತೆರಳಿ ಸಿಒ ರವಿ ಅವರನ್ನು ಭೇಟಿಯಾಗಿ, ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಅಳಲು ತೋಡಿಕೊಂಡರು. ಪ್ರತಿಕ್ರಿಯಿಸಿದ ಸಿಒ, ಜಿಲ್ಲಾಡಳಿತದ ನಿರ್ದೇಶನದಂತೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುತ್ತಿದೆ. ಸುಗಮ ಸಂಚಾರಕ್ಕೆ ಸ್ವಯಂ ಪ್ರೇರಿತರಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಆಗ್ರಹಿಸಿದ್ದ ಸದಸ್ಯರು: ಪುರಸಭೆಯಲ್ಲಿ ಏ.17ರಂದು ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಂಪೌಂಡ್ ಗೋಡೆಗೆ ಶಾಶ್ವತವಾಗಿ ಡಬ್ಬಾ ಅಂಗಡಿ, ಟೀನ್ ಶೆಡ್‌ಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಬಸ್ ನಿಲ್ದಾಣ ವೃತ್ತದ ಬಳಿ ಸಾಕಷ್ಟು ತಳ್ಳು ಬಂಡಿಗಳ ತಲೆ ಎತ್ತಿವೆ. ರಸ್ತೆ ಮೇಲೆ ಬೈಕ್‌ಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದ್ದು, ತೆರವು ಕಾರ್ಯ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಸದಸ್ಯರು ಆಗ್ರಹಿಸಿದ್ದರು. ಆಗ ಸಭೆಯಲ್ಲಿದ್ದ ಸಿಪಿಐ ಪುಂಡಲೀಕ ಪಟಾತ್ತಾರ ತೆರವು ಕಾರ್ಯ ಕೈಗೊಂಡರೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವುದಾಗಿ ತಿಳಿಸಿದ್ದರು.