

ಲಿಂಗಸುಗೂರು: ಶೈಕ್ಷಣಿಕ, ಸಾಮಾಜಿಕ ಹಾಗೂ ಮೂಲ ಸೌಲಭ್ಯಗಳಿಂದ ದೂರವೇ ಉಳಿದ ಅಲೆಮಾರಿ ಜನಾಂಗ ಇಂದಿಗೂ ಸ್ವಂತ ಮನೆಯಿಲ್ಲದೇ ಹರಿದ ಬಟ್ಟೆಯ ಶೆಡ್ಡುಗಳಲ್ಲಿ, ಟಿನ್ ಶೆಡ್‌ಗಳಲ್ಲಿ ವಾಸಿಸಿ ಜೀವನ ನಡೆಸುವಂತಾಗಿದೆ. ಅವರು ಶಾಶ್ವತ ಸೂರಿಗಾಗಿ ಎದುರು ನೋಡುತ್ತಿದೆ.
ಪಟ್ಟಣದ ನಾಲ್ಕನೇ ವಾರ್ಡ್‌ನ ಕಾಳಾಪುರ ರಸ್ತೆ, ನಾರಾಯಣಪುರ ರಸ್ತೆ, ಸಂತೆ ಬಜಾರ್‌ಗಳಲ್ಲಿ ಮೂರು ದಶಕಗಳಿಂದಲೂ ವಾಸಿಸುತ್ತಿರುವ 100 ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಇಂದಿಗೂ ಬದುಕು ಕಟ್ಟಿಕೊಳ್ಳಲು ಅಲೆದಾಡಬೇಕಿದೆ. ಬಟ್ಟೆ ಸೇರಿದಂತೆ ಸ್ಟೇಷನರಿ ಸಾಮಾನುಗಳನ್ನು ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳಬೇಕಿದೆ. ಜತೆಗೆ ವೇಷಗಾರರಾಗಿಯೂ ಅಲೆವಂತ ಸ್ಥಿತಿ ಇದೆ.
ಶಿಕ್ಷಣವಂಚಿತ ಮಕ್ಕಳು: ಅಲೆಮಾರಿ ಸಮುದಾಯದ ಮಕ್ಕಳಿಗೆ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗಳ ದರ್ಶನವೇ ಇಲ್ಲ. ಇನ್ನು ಒಂದೆಡೆ ನೆಲೆ ನಿಲ್ಲದ ಕಾರಣ ಉನ್ನತ ಹಾಗೂ ಆಧುನಿಕ ಶಿಕ್ಷಣ ಪಡೆಯುವುದು ದೂರದ ಮಾತಾಗಿದೆ. ಆದರೆ, ಇವರ ಪ್ರತಿಭೆ ಮತ್ತು ಸೃಜನಶೀಲ ಸಾಮರ್ಥ್ಯ ಬೆರಗು ಮೂಡಿಸುತ್ತದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಜನ ಸಾಮಾನ್ಯರಿಗೆ ಸರಳವಾಗಿ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದನ್ನೂ ಓದಿ...
ಮೂಲಸೌಕರ್ಯ ವಂಚಿತರು: ಈ ಸಮುದಾಯಗಳು ಒಂದೆಡೆ ವಾಸಿಸಲು ಬಯಲು ಭೂಮಿಯನ್ನು ಇಂತಿಷ್ಟು ವರ್ಷ ಎಂದು ಗುತ್ತಿಗೆ ಪಡೆದು ಟೆಂಟ್‌ಗಳನ್ನು ಹಾಕಿ ಜೀವನ ನಡೆಸುತ್ತಿದ್ದಾರೆ. ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆದು ಹಲವರು ಜಾಗ ಖರೀದಿಸಿದ್ದಾರೆ. ಆದರೆ, ಶಾಶ್ವತ ಸೂರು ಕಟ್ಟಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಕರಡಕಲ್ಲ ತಾಂಡಾ ಹತ್ತಿರ ಪುರಸಭೆಯಿಂದ ಜಾಗ ಕೊಡುವುದಾಗಿ ಹೇಳಿದ್ದರೂ ಇದುವರೆಗೂ ನೀಡಿಲ್ಲ. ವಿದ್ಯುತ್, ಶುದ್ಧ ಕುಡಿವ ನೀರು, ರಸ್ತೆ, ಚರಂಡಿ, ಶೌಚಗೃಹ, ಅಂಗನವಾಡಿ ಸೌಲಭ್ಯಗಳಿಲ್ಲದೆ ಜೀವನ ನಡೆಸಲು ಈ ಆಧುನಿಕ ಯುಗದಲ್ಲೂ ಪರದಾಡುತ್ತಿರುವುದು ದುರಂತ.
ಒಳಮೀಸಲಾತಿಯಲ್ಲಿ ಅನ್ಯಾಯ: ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿಗಳಿಗೆ ಸರ್ಕಾರ ಒಳಮೀಸಲು ವರ್ಗೀಕರಣ ಮಾಡಿದ್ದು, ಇದರಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅತಂತ್ರ ಸ್ಥಿತಿಯಲ್ಲಿರುವ ಅಲೆಮಾರಿಗಳಿಗೆ ನ್ಯಾಯ ಕೊಡಿಸಲು ಸರ್ಕಾರ ಮುಂದಾಗಬೇಕಿದೆ ಎನ್ನುವುದು ಪ್ರಜ್ಞಾವಂತರ ಮಾತು. ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಅಲೆಮಾರಿ ಜನಾಂಗ ವಾಸಿಸುವ ಸ್ಥಳದಲ್ಲಿ ಮೂಲ ಸೌಕರ್ಯ ಕಲ್ಪಿಸಿ ಬದುಕು ಕಟ್ಟಿಕೊಳ್ಳಲು ವಾಸ ಮಾಡಲು ಜಾಗ, ಮನೆ ಕಟ್ಟಿಕೊಳ್ಳಲು ವಸತಿ ಯೋಜನೆಯ ಲಾಭ ದೊರಕಿಸಿಕೊಡಲು ಪುರಸಭೆ ಜನಪ್ರತಿನಿಧಿಗಳು ಮುಂದಾಗಬೇಕಿದೆ.
==========
ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡಲು ಸಹಾಯಕ ಆಯುಕ್ತರ ಜತೆ ಚರ್ಚಿಸಲಾಗಿದೆ. ಅವರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಸೌಕರ್ಯ ಪಡೆಯಲು ಕೆಎಲ್‌ಎ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮೂಲ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು.
> ರವಿ ಸಿರಗುಪ್ಪಿ, ಮುಖ್ಯಾಧಿಕಾರಿ ಪುರಸಭೆ, ಲಿಂಗಸುಗೂರು
ಸುಮಾರು ವರ್ಷಗಳಿಂದ ಲಿಂಗಸುಗೂರು ಪಟ್ಟಣದಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಶಾಶ್ವತ ವಾಸಸ್ಥಾನ ಒದಗಿಸಬೇಕು. ಈಗಿರುವ ಸ್ಥಳಗಳಲ್ಲಿ ವಿದ್ಯುತ್, ಕುಡಿವ ನೀರು, ಚರಂಡಿ, ಅಂಗನವಾಡಿ ಕೇಂದ್ರದ ವ್ಯವಸ್ಥೆ ಮಾಡಬೇಕು. ನಮ್ಮ ಗೋಳು ಯಾರೂ ಕೇಳುತ್ತಿಲ್ಲ.
> ಶಂಕರ್, ಅಲೆಮಾರಿ ನಿವಾಸಿ, ಲಿಂಗಸುಗೂರು