ಉದ್ಘಾಟನೆ ಕಾಣದ ಅಕ್ಕ ಕೆಫೆ ಕಟ್ಟಡ

Lingasugur akka cafe
ಲಿಂಗಸುಗೂರು ತಾಪಂ ಆವರಣದಲ್ಲಿ ನಿರ್ಮಿಸಿರುವ ಅಕ್ಕ ಕೆಫೆ ಕ್ಯಾಂಟೀನ್ ಕಟ್ಟಡ.
Published on

ಎನ್. ಬಸವರಾಜ

ಲಿಂಗಸುಗೂರು: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ‘ಅಕ್ಕ ಕೆಫೆ’ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ.

ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ಬಲ ನೀಡುವುದರ ಜತೆ ಬಡ, ಮಧ್ಯಮ ವರ್ಗದವರಿಗೆ ಗುಣಮಟ್ಟದ ಶುಚಿ-ರುಚಿಯಾದ ಪೌಷ್ಟಿಕ ಆಹಾರ ಕೈಗೆಟುಕುವ ದರದಲ್ಲಿ ವಿತರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರೇ ನಡೆಸುವ ಅಕ್ಕ ಕೆಫೆ ಕ್ಯಾಂಟೀನ್‌ಗಳನ್ನು ಸ್ಥಾಪಿಸುವುದಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.

ಅದರಂತೆ ರಾಯಚೂರು ಜಿಲ್ಲೆಯಲ್ಲಿ ಕೆಫೆ ತೆರೆಯಲು ಲಿಂಗಸುಗೂರು ಮತ್ತು ಸಿಂಧನೂರು ಪಟ್ಟಣ ಆಯ್ಕೆ ಮಾಡಲಾಗಿತ್ತು. ಸದ್ಯ ಲಿಂಗಸುಗೂರಲ್ಲಿ ಕೆಫೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಗೋಡೆಗಳಿಗೆ ವರ್ಲಿ ಕಲೆ ಮೂಲಕ ಅಂದವಾದ ಚಿತ್ರಗಳನ್ನು ಬಿಡಿಸಲಾಗಿದ್ದು, ಕಂಗೊಳಿಸುತ್ತಿದೆ. ಆದರೆ, ಕಾಮಗಾರಿ ಮುಗಿದು ಒಂದು ತಿಂಗಳು ಗತಿಸಿದರೂ ಉದ್ಘಾಟನೆ ಭಾಗ್ಯ ಕಾಣದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಕೆಆರ್‌ಐಡಿಎಲ್‌ಗೆ ಜವಾ ್ದಾರಿ: ಅಕ್ಕ ಕೆಫೆ ಸ್ಥಾಪಿಸಲು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಸಂಸ್ಥೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 11.70 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣ, ದುರಸ್ತಿ, ನೆಲಹಾಸು ವ್ಯವಸ್ಥೆ, ಬೆಳಕು, ಶೇಖರಣಾ ಕ್ಯಾಬಿನೆಟ್, ಕೊಳಾಯಿ, ಪೀಠೋಪಕರಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ನೀಡಲಾಗಿದೆ.

ಮಹಿಳಾ ಸ್ವ-ಸಹಾಯ ಗುಂಪು ಆಯ್ಕೆ

ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕೆಫೆ ನಿರ್ವಹಣೆಗೆ ಲಿಂಗಸುಗೂರು ತಾಲೂಕಿನ ನೀರಲಕೇರಿ ಗ್ರಾಮದ ಶ್ರೀ ಶಾಂಭವಿ ಸಂಜೀವಿನಿ ಸ್ವ-ಸಹಾಯ ಗುಂಪನ್ನು ಗುರುತಿಸಲಾಗಿದೆ. ಈ ಕುರಿತು ತಾಪಂ ಇಒ ರಾಯಚೂರು ಜಿಪಂಗೆ ಶಿಫಾರಸು ಮಾಡಿದ್ದಾರೆ. ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಂಪೂರ್ಣ ಹೊಣೆ ನೀಡಲಾಗಿದೆ. ಗ್ರಾಹಕರಿಗೆ ಗುಣಮಟ್ಟದ ಉಪಾಹಾರ, ಊಟ ಒದಗಿಸುವ ಜತೆಗೆ ಮಹಿಳಾ ಸದಸ್ಯರೇ ನಿರ್ವಹಣೆ ಮಾಡಲಿದ್ದಾರೆ.

ಲಿಂಗಸುಗೂರು ತಾಪಂ ಆವರಣದಲ್ಲಿ ಅಕ್ಕ ಕೆಫೆ ಕಟ್ಟಡ ನಿರ್ಮಿಸಲಾಗಿದೆ. ರಾಯಚೂರು ಜಿಪಂ ಯೋಜನಾ ನಿರ್ದೇಶಕರು ಕಟ್ಟಡ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಅವರು ಒಪ್ಪಿಗೆ ಕೊಟ್ಟ ನಂತರ ಉದ್ಘಾಟನೆ ಮಾಡಲಾಗುವುದು. | ಹನುಮಂತಪ್ಪ ಎಇಇ, ಕೆಆರ್‌ಐಡಿಎಲ್, ಲಿಂಗಸುಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net