

ಲಿಂಗಸುಗೂರು: ಹಿಂಗಾರು ಹಂಗಾಮಿನಲ್ಲಿ ನಾರಾಯಣಪುರ ಜಲಾಶಯದಿಂದ ಬಲದಂಡೆ ಕಾಲುವೆ, ರಾಂಪುರ ಏತ ನೀರಾವರಿ ನಾಲೆಗಳಿಗೆ ಏ.10 ರವರೆಗೆ ನಿರಂತರ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಾಲೂಕಿನಲ್ಲಿ ಅತಿಹೆಚ್ಚು ಕೆಂಪು ಭೂಮಿ ಇರುವುದರಿಂದ ಎಷ್ಟೇ ನೀರು ಹರಿಸಿದರೂ ಸಾಕಾಗುವುದಿಲ್ಲ.
ಮುಂದಿನ ದಿನಗಳಲ್ಲಿ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಅವೈಜ್ಞಾನಿಕವಾಗಿ ವಾರಾಬಂದಿ ಮೂಲಕ ನೀರು ಹರಿಸಿದರೆ ಬೆಳೆಗಳಿಗೆ ಸಮಸ್ಯೆಯಾಗುತ್ತದೆ.
ಒಂದು ವೇಳೆ ವಾರಾಬಂದಿ ಜಾರಿಗೆ ತಂದರೆ 14 ದಿನಗಳವರೆಗೆ ನಿರಂತರ ನೀರು ಹರಿಸಬೇಕು ಹಾಗೂ ಏಳು ದಿನ ನೀರು ಹರಿಸುವುದನ್ನು ಬಂದ್ ಮಾಡಬೇಕು. ನಿರಂತರ ನೀರು ಹರಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ದುರ್ಗಾ ಪ್ರಸಾದ, ಪ್ರಮುಖರಾದ ರಾಮಣ್ಣ ಗುರುಗುಂಟಾ, ಬಾಷಾಸಾಬ್, ಮಹ್ಮದಸಾಬ್, ಲಕ್ಷ್ಮೀ ನಾರಾಯಣ, ಹನುಮಂತ, ಮೌಲಾಸಾಬ್, ಹನುಮಂತ, ಬಸವ ಗೌಡೂರು, ಸದಾನಂದ, ಆದಪ್ಪ ಜೋಗೇರ, ಹನಮಂತ ಹಳ್ಳಿ, ನಾಗಪ್ಪ ಪುನೇದ ಇತರರಿದ್ದರು.