ಸರ್ಕಾರ ಪಿಎಫ್- ಇಎಸ್‌ಐ ಸೌಲಭ್ಯ ಕಲ್ಪಿಸಲಿ

Lingasugur tuci protest
ಲಿಂಗಸುಗೂರು ಎಸಿ ಕಚೇರಿ ಆವರಣದಲ್ಲಿ ಸರ್ಕಾರಿ ವಸತಿ ನಿಲಯ ಮತ್ತು ವಸತಿ ಶಾಲೆಗಳ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ ಮತ್ತು ಬಿಸಿಎಂ ಇಲಾಖೆ ಅಧಿಕಾರಿ ರಮೇಶ ರಾಠೋಡ್‌ಗೆ ಮನವಿ ಸಲ್ಲಿಸಿದರು. ಟಿಯುಸಿಐ ಅಧ್ಯಕ್ಷ ಆರ್.ಮಾನಸಯ್ಯ, ಪ್ರಮುಖರಾದ ತಿಪ್ಪರಾಜ ಗೆಜ್ಜಲಗಟ್ಟಾ, ಆದೇಶ ಹಿರೇನಗನೂರು, ಎಂ.ಗಂಗಾಧರ, ಜಿ.ಅಮರೇಶ, ಶಾಂತಕುಮಾರ, ಬಸವರಾಜ ಹಿರೇಹೆಸರೂರು, ಎಂ.ನಿಸರ್ಗ, ರಮೇಶ, ಚನ್ನಬಸವ, ಚಿದಾನಂದ, ಕಮಲಮ್ಮ, ನಸೀರಾ ಬೇಗಂ, ಗಂಗಮ್ಮ ಇತರರಿದ್ದರು.
Published on

ಲಿಂಗಸುಗೂರು: ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಅಡುಗೆ ಮತ್ತು ಕಾವಲು ಕೆಲಸ ಮಾಡುವ ಕಾರ್ಮಿಕರಿಗೆ ಬಾಕಿ ವೇತನ ಮತ್ತು ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಎಸಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಕ್ರೈಸ್ತ ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಅಡುಗೆ ಮತ್ತು ಕಾವಲು ಕೆಲಸ ಮಾಡುವ ಕಾರ್ಮಿಕರು ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆಯಾ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರ್ಮಿಕರಿಗೆ ಸಿಗಬೇಕಾದ ವೇತನ ಸರಿಯಾಗಿ ಪಾವತಿಸುತ್ತಿಲ್ಲ. ನಿಯಮಾನುಸಾರ ದಿನಕ್ಕೆ ಎಂಟು ಗಂಟೆ ಕೆಲಸದ ಬದಲು ಹನ್ನೆರಡು ಗಂಟೆ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಕಾರ್ಮಿಕರಿಗೆ ಕೆಲಸದ ಒತ್ತಡ, ಮಾನಸಿಕ ಕಿರುಕುಳ, ಬೆದರಿಕೆಗಳು, ಅಕ್ರಮ ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ವಾರದ ರಜೆ, ರಾಷ್ಟ್ರೀಯ ರಜೆ ನೀಡಬೇಕು. ದಿನಕ್ಕೆ ಎಂಟು ಗಂಟೆ ಕೆಲಸ ವಹಿಸಬೇಕು. ಹೆಚ್ಚುವರಿ ಕೆಲಸಕ್ಕೆ ಒಟಿ ನೀಡಬೇಕು.

ಪ್ರತಿ ತಿಂಗಳು ಪಿಎಫ್ ಮತ್ತು ಇಎಸ್‌ಐ ಉದ್ಯೋಗದಾತರ ಶೇರ್ ಜಮಾ ಆಗಬೇಕು. ಗುತ್ತಿಗೆ ಕಾರ್ಮಿಕರ ಕಾಯ್ದೆ ಮತ್ತು ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ ಮತ್ತು ಬಿಸಿಎಂ ಇಲಾಖೆ ಅಧಿಕಾರಿ ರಮೇಶ ರಾಠೋಡ್‌ಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net