ಜೀವಕಳೆ ತುಂಬಿದ ಮಳೆ - ಬಾಡುತ್ತಿದ್ದ ಬೆಳೆಗಳಿಗೆ ಅನುಕೂಲ

lng-1
ಲಿಂಗಸುಗೂರು ಸಮೀಪದ ಹೊನ್ನಳ್ಳಿ ಜಮೀನಿನಲ್ಲಿರುವ ತೊಗರಿ ಬೆಳೆ ನಳನಳಿಸುತ್ತಿರುವುದು.
Published on

ಲಿಂಗಸುಗೂರು: ಕಳೆದ ಒಂದು ತಿಂಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಈಗ ಮತ್ತೆ ಕೃಪೆ ತೋರಿದ್ದು, ಗುರುವಾರ ರಾತ್ರಿ ಹಾಗೂ ಶನಿವಾರ ಸುರಿದ ಧಾರಾಕಾರ ಮಳೆಯಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ಕಳೆದ ಮೇ ಎರಡನೇ ವಾರದಲ್ಲಿ ತಾಲೂಕಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆಯಿಂದ ಮುಂಗಾರು ಮುನ್ನವೇ ರೈತರು ಬಿತ್ತನೆ ಮಾಡಿದ್ದರು. ಕಡಿಮೆ ಮಳೆಯ ಮಧ್ಯೆಯೂ ಖುಷ್ಕಿ ಪ್ರದೇಶದಲ್ಲಿ ಅತೀ ಹೆಚ್ಚು ಬಿತ್ತನೆಯಾಗಿತ್ತು.

ನೀರಾವರಿ ಪ್ರದೇಶದಲ್ಲಿ ಭತ್ತ, ಹತ್ತಿ ಬಿತ್ತನೆ ಮುಂದುವರಿದಿದ್ದು, ಈವರೆಗೂ ಶೇ.90 ಬಿತ್ತನೆಯಾಗಿದೆ. ಮೇ ತಿಂಗಳ ಬಿತ್ತನೆ ಬಳಿಕ ಆಗಾಗ ಅಲ್ಪ ಮಳೆಯಾಗಿತ್ತದರೂ ಹಸಿಮಳೆ ಆಗಿರಲಿಲ್ಲ. ಗುರುವಾರ ರಾತ್ರಿ ಸುರಿದ ಮಳೆಯಿಂದ ಬೆಳೆಗಳಿಗೆ ಆಸರೆಯಾಗಿದ್ದು, ರೈತರ ಆತಂಕ ದೂರವಾಗಿದೆ.

ತಾಲೂಕಿನಾದ್ಯಂತ ಪ್ರತಿ ವರ್ಷ ತೊಗರಿ ಬಿತ್ತನೆ ಪ್ರದೇಶ ಹೆಚ್ಚಿರುತ್ತದೆ. ಕಳೆದ ವರ್ಷವೂ ತೊಗರಿ ಬಿತ್ತನೆ ವ್ಯಾಪ್ತಿ ಹೆಚ್ಚಿತ್ತು. ಆದರೆ, ಬೆಳೆ ಬಂದ ಆರಂಭದಲ್ಲಿ ಉತ್ತಮ ಬೆಲೆ ಸಿಕ್ಕರೂ ನಂತರ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದರು.

ಆದರೂ, ಮತ್ತೆ ಈ ಬಾರಿ ತೊಗರಿ ಬಿತ್ತನೆ ವ್ಯಾಪ್ತಿ ಹೆಚ್ಚಿದೆ. ಈಗ ಬೆಳೆದು ನಿಂತ ಬೆಳೆಗಳಿಗೆ ಮಳೆರಾಯನ ಕೃಪೆಯಿಂದ ಬೆಳೆಗಳಿಗೆ ಜೀವಕಳೆ ತುಂಬಿದೆ.

ಗುರಿ ಮೀರಿದ ಪ್ರದೇಶ

ಈ ಬಾರಿ ಖುಷ್ಕಿ ಜಮೀನುಗಳಿಗೆ 22,000 ಹೆಕ್ಟೇರ್ ಬಿತ್ತನೆ ಗುರಿ ನೀಡಲಾಗಿತ್ತು. ಈ ಪೈಕಿ 24,360 ಹೆಕ್ಟೇರ್ ಬಿತ್ತನೆ ಮಾಡಲಾಗಿದ್ದು, ಗುರಿ ಮೀರಿ ಸಾಧನೆಯಾಗಿದೆ.

ಇನ್ನು ನೀರಾವರಿ ಪ್ರದೇಶದಲ್ಲಿ 2,660 ಹೆಕ್ಟೇರ್ ಗುರಿ ಪೈಕಿ 360 ಹೆಕ್ಟೇರ್ ಬಿತ್ತನೆಯಾಗಿದೆ. ಹೆಸರು ಬೆಳೆಯು ಖುಷ್ಕಿ ಪ್ರದೇಶಕ್ಕೆ 7,000 ಹೆಕ್ಟೇರ್ ಗುರಿಯಲ್ಲಿ 6,410 ಹೆಕ್ಟೇರ್ ಬಿತ್ತನೆಯಾಗಿದ್ದು, ನೀರಾವರಿಯಲ್ಲಿ 1,900 ಹೆಕ್ಟೇರ್ ಗುರಿ ಪೈಕಿ 1,550 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ.

ಖುಷ್ಕಿಯಲ್ಲಿ ಹತ್ತಿ ಬಿತ್ತನೆ ಗುರಿಯು 900 ಹೆಕ್ಟೇರ್ ಇದ್ದು, 4,450 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ನೀರಾವರಿಯಲ್ಲಿ 350 ಹೆಕ್ಟೇರ್ ಗುರಿ ಪೈಕಿ 2,226 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ತೊಗರಿ ಮತ್ತು ಹತ್ತಿ ಗುರಿ ಮೀರಿ ಬಿತ್ತನೆಯಾಗಿದ್ದು, ಉತ್ತಮ ಮಳೆಯಿಂದ ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಗರಿಗೆದರಿದೆ.

=====

ಲಿಂಗಸುಗೂರು ತಾಲೂಕಿನಲ್ಲಿ ಶೇ.90 ಬಿತ್ತನೆಯಾಗಿದೆ. ನೀರಾವರಿ ಕ್ಷೇತ್ರದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಳೆಯಾಗಿದ್ದರಿಂದ ಹತ್ತಿ, ತೊಗರಿ, ಹೆಸರು ಹಾಗೂ ಇನ್ನಿತರ ಖುಷ್ಕಿ ಬೆಳೆಗಳಿಗೆ ಅನುಕೂಲವಾಗಿದೆ.

> ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ, ಲಿಂಗಸುಗೂರು

=====

ಕಳೆದ ಮೇ ತಿಂಗಳಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ಬಿತ್ತನೆ ನಂತರ ಆಗಾಗ ಅಲ್ಪಸ್ವಲ್ಪ ಮಳೆಯಾಗಿತ್ತು. ಜುಲೈ ತಿಂಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತ ತಲುಪಿದ್ದವು. ಎರಡು ದಿನಗಳಿಂದ ಸುರಿದ ಮಳೆಗೆ ಬೆಳೆಗಳಿಗೆ ಅನುಕೂಲವಾಗಿದೆ.

> ಲಚಮಪ್ಪ ಕಂಬಾರ, ರೈತ, ಗುರುಗುಂಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net