ಜಲ ಸಮಸ್ಯೆಗಿಲ್ಲ ಶಾಶ್ವತ ಪರಿಹಾರ

Lingasugur water problem
ನಾಗಲಾಪುರದಲ್ಲಿ ನೀರಿನ ಸಮಸ್ಯೆ ಪರಿಹರಿಸುವಂತೆ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿದರು.
Published on

ಅಮರೇಶಸ್ವಾಮಿ ಬಲ್ಲಟಗಿ

ಲಿಂಗಸುಗೂರು : ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಡಿವ ನೀರಿನ ಯೋಜನೆಗಳನ್ನು ಜಾರಿಗೆ ತಂದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಜೀವಜಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಕುಡಿವ ನೀರಿಗಾಗಿ ಜನರು ಪರದಾಡುವುದು ತಪ್ಪುತ್ತಿಲ್ಲ.

ತಾಲೂಕಿನಲ್ಲಿ 249 ದೊಡ್ಡಿಗಳು, 89 ತಾಂಡಾಗಳು ಸೇರಿ ಒಟ್ಟು 140 ಹಳ್ಳಿಗಳಿವೆ. ಇದೀಗ ಬೇಸಿಗೆ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ಹಳ್ಳಿಗಳು, ದೊಡ್ಡಿ, ತಾಂಡಾಗಳಲ್ಲಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕುಡಿವ ನೀರಿನ ಸಮಸ್ಯೆಯಿಂದ ಜನ-ಜಾನುವಾರುಗಳು ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ. ತಾಲೂಕು ಆಡಳಿತ ಪ್ರಸಕ್ತ ವರ್ಷ ಕುಡಿವ ನೀರಿನ ಸಮಸ್ಯಾತ್ಮಕ 29 ಹಳ್ಳಿಗಳನ್ನು ಗುರುತಿಸಿದ್ದು, ಏಪ್ರಿಲ್ ಮತ್ತು ಮೇನಲ್ಲಿ ಕುಡಿವ ನೀರಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ತಾಪಂ 15 ನೇ ಹಣಕಾಸು ಯೋಜನೆಯಡಿ ನಿರ್ವಹಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ.

ತಾಲೂಕಿನ ಹೊನ್ನಳ್ಳಿ ಬಳಿಯ ರಾಜೀವಗಾಂಧಿ ಬಹುಗ್ರಾಮ ಕುಡಿವ ನೀರು ಯೋಜನೆಯಡಿ ಏಳು ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ತಾಲೂಕಾದ್ಯಂತ 781 ಬೋರ್‌ವೆಲ್‌ಗಳಿವೆ. ಅಲ್ಲದೆ 124 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 106 ಆರ್‌ಒ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 18 ಆರ್‌ಒ ಪ್ಲಾಂಟ್‌ಗಳು ಸಂಪೂರ್ಣ ನಿಷ್ಕ್ರಿಯಗೊಂಡು ದುರಸ್ತಿಗೊಳಿಸದ ಸ್ಥಿತಿಗೆ ಬಂದಿವೆ. ಸಮಸ್ಯಾತ್ಮಕ ಹಳ್ಳಿಗಳಿಗೆ ಕುಡಿವ ನೀರು ಪೂರೈಕೆಗೆ ಹೊಸ ಬೋರ್‌ವೆಲ್ ಕೊರೆಸುವುದು ಅಥವಾ ಖಾಸಗಿಯಾಗಿ ಬಾಡಿಗೆ ಪಡೆದು ನೀರು ಪೂರೈಸಬೇಕಿದೆ. ಇನ್ನು ಕೆಲವೆಡೆ ನೀರಿನ ಯಾವುದೇ ಮೂಲ ಲಭ್ಯವಾಗದ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಆಯಾ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

ಬೇಸಿಗೆ ವೇಳೆ ಕುಡಿವ ನೀರಿನ ಸಮಸ್ಯೆ ಇರುವ 29 ಹಳ್ಳಿಗಳನ್ನು ಗುರುತಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಲಾಗುವುದು. ಏಪ್ರಿಲ್ ಮತ್ತು ಮೇನಲ್ಲಿ ನೀರಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಕಂಡುಬಂದರೆ ಬಾಡಿಗೆ ಪಡೆಯಲು ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಕಾಯ್ದಿರಿಸಿ ಕೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. | ಉಮೇಶ ತಾಪಂ ಇಒ, ಲಿಂಗಸುಗೂರು ಲಿಂಗಸುಗೂರು ತಾಲೂಕಿನಲ್ಲಿ ಕೃಷ್ಣಾ ನದಿ, ಬಲದಂಡೆ ಮತ್ತು ರಾಂಪುರ ಏತನೀರಾವರಿ ನಾಲೆಗಳ ಮೂಲಕ ನೀರು ಹರಿಯುತ್ತಿದ್ದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ. ಬೇಸಿಗೆ ವೇಳೆ ಗ್ರಾಮೀಣ ಭಾಗದ ಕೆಲ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ತಾಲೂಕು ಆಡಳಿತ ಗಮನ ಹರಿಸಬೇಕು. | ಶಿವಪುತ್ರಗೌಡ ಜಿಲ್ಲಾಧ್ಯಕ್ಷ, ರೈತ ಸಂಘ (ಕೋಡಿಹಳ್ಳಿ ಬಣ), ಲಿಂಗಸುಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net