13ರಂದು ರಾಷ್ಟ್ರೀಯ ಲೋಕ ಅದಾಲತ್

UNTILETED
ಲಿಂಗಸುಗೂರು ಕೋರ್ಟ್ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ ನಡೆಯಿತು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ, ತಾಲೂಕು ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಂಬಣ್ಣ.ಕೆ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ, ಕಾರ್ಯದರ್ಶಿ ಬಾಲರಾಜ ಸಾಗರ, ಸರ್ಕಾರಿ ಸಹಾಯಕ ಅಭಿಯೋಜಕ ವಿರುಪಣ್ಣ ದುಮತಿ ಇತರರಿದ್ದರು.
Published on

ಲಿಂಗಸುಗೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.13 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಬುಧವಾರ ಏರ್ಪಡಿಸಿದ್ದ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗುವುದು. ಇದರಿಂದ ಖರ್ಚಿಲ್ಲದೆ ಶೀಘ್ರ ನ್ಯಾಯ ದೊರಕುತ್ತದೆ. ಲೋಕ ಅದಾಲತ್ ಕುರಿತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ನಡೆಸಬೇಕು ಎಂದು ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಕೆಲ ವಾಹನಗಳಿಗೆ ನಂಬರ್ ಪ್ಲೇಟ್‌ಗಳಿಲ್ಲದೆ ಸಂಚರಿಸುತ್ತಿವೆ. ರಸ್ತೆ ಮೇಲೆ ತಳ್ಳುವ ಬಂಡಿಗಳ ನಿಲ್ಲಿಸಿ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಲಾಗುತ್ತಿದೆ. ಬೈಕ್ ಮೇಲೆ ಮೂವರು ಸವಾರರು ಸಂಚರಿಸಿದರೆ ಪ್ರಕರಣ ದಾಖಲಿಸಬೇಕು ಎಂದು ಲಿಂಗಸುಗೂರು ಪಿಎಸ್‌ಐ ವೀರಭದ್ರಪ್ಪ, ಹಟ್ಟಿ ಪಿಎಸ್‌ಐ ಧರ್ಮಪ್ಪಗೆ ನ್ಯಾಯಾಧೀಶೆ ಮಂಜುಳಾ ಸೂಚಿಸಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಅಂಬಣ್ಣ.ಕೆ ಮಾತನಾಡಿ, ಪಟ್ಟಣದಲ್ಲಿ ಬಸ್ ನಿಲ್ದಾಣ ಸೇರಿದಂತೆ ರಸ್ತೆ ಅಕ್ಕ ಪಕ್ಕದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸವನ್ನು ವಾಹನದಲ್ಲಿ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಲಿಂಗಸುಗೂರು ಪುರಸಭೆ ನೌಕರ ಗದ್ದೆಪ್ಪ, ಮುದಗಲ್ ಪುರಸಭೆ ಮುಖ್ಯಾಧಿಕಾರಿ ಆರಿಫಾ ಉನ್ನಿಸಾ ಬೇಗಂ, ಹಟ್ಟಿ ಪಪಂ ಅಧಿಕಾರಿ ಚಂದ್ರಶೇಖರಗೆ ಸೂಚಿಸಿದರು.

ಲಿಂಗಸುಗೂರು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಕಾರ್ಯದರ್ಶಿ ಬಾಲರಾಜ ಸಾಗರ, ಸರ್ಕಾರಿ ಸಹಾಯಕ ಅಭಿಯೋಜಕ ವಿರುಪಣ್ಣ ದುಮತಿ, ವಕೀಲರಾದ ಸೋಮನಾಳ, ಗಿರೀಶ, ಕಂದಾಯ ಇಲಾಖೆ ಶಿರಸ್ತೇದಾರ್ ಸುಜಾತಾ, ಬಸ್ ಡಿಪೋ ನಿಯಂತ್ರಣಾಧಿಕಾರಿ ಮಹಾರುದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಬಸ್ಸಮ್ಮ, ಜೆಸ್ಕಾಂ ಅಧಿಕಾರಿ ಬನ್ನೆಪ್ಪ ಕರಿಬಂಟನಾಳ, ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಕಾರ್ಮಿಕ ಇಲಾಖೆ ನೌಕರ ಮೌನೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net