

ಎನ್. ಬಸವರಾಜ
ಲಿಂಗಸುಗೂರು : ತಾಲೂಕಿನ ಕೃಷ್ಣಾ ನದಿಯಲ್ಲಿ ಅಪಾರ ನೀರು ಹರಿಯುತ್ತಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಕಾಲುವೆಗಳಿಗೆ ಹನಿ ನೀರಿಲ್ಲ. ಇದು ರಾಂಪುರ ಏತ ನೀರಾವರಿ ಯೋಜನೆಯ ದುಸ್ಥಿತಿ.
ನಾರಾಯಣಪುರ ಜಲಾಶಯದ ಹಿನ್ನೀರನ್ನು ಬಳಸಿಕೊಂಡು ಲಿಂಗಸುಗೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1994ರಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ರಾಂಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ 20ನೇ ಮುಖ್ಯ ನಾಲೆ ಹಾಗೂ 9 ವಿತರಣಾ ಕಾಲುವೆ ಮೂಲಕ 19,500 ಹೆಕ್ಟೇರ್ ಪ್ರದೇಶಕ್ಕೆ ಹಾಗೂ 2ನೇ ಹಂತದಲ್ಲಿ 20ನೇ ಮುಖ್ಯ ನಾಲೆಯಿಂದ 27ನೇ ಕಿಮೀವರೆಗೆ ಮೂರು ವಿತರಣಾ ನಾಲೆಗಳ ಮೂಲಕ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದ್ದರಿಂದ ರೈತರು ಖುಷಿಯಾಗಿದ್ದರು. ಆದರೆ, ಕಳೆದ 5 ವರ್ಷಗಳಿಂದ ಕಾಲುವೆಗಳ ನಿರ್ವಹಣೆ, ಮೋಟಾರು ಪಂಪ್‌ಗಳ ದುರಸ್ತಿ ಕಾಣದೆ ನಾಲೆಗಳಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗಿಲ್ಲ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಅನೇಕ ಬಾರಿ ನೀರಿಲ್ಲದೆ ಒಣಗಿ ನಷ್ಟವಾಗಿದ್ದೂ ಇದೆ.
ಕಳೆದ ಜು.8ರಂದು ಬೆಂಗಳೂರಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಇದರಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ, ಈವರೆಗೆ ಸಮರ್ಪಕ ನೀರು ಹರಿಸದ ಕಾರಣ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಾಲುವೆಯಲ್ಲಿ ಕಸ ಬೆಳೆದಿದ್ದು, ತೆರವು ಮಾಡಿಲ್ಲ. ಮೊದಲನೇ ಹಂತದ 20ನೇ ಮುಖ್ಯ ನಾಲೆ, 9 ವಿತರಣಾ ನಾಲೆ ಮೂಲಕ ನವಲಿ, ರಾಂಪುರ, ನರಕಲದಿನ್ನಿ, ಈಚನಾಳ, ಬೆಂಡೋಣಿ, ಆನೆಹೊಸೂರು, ಕಳ್ಳಿ ಲಿಂಗಸುಗೂರು, ಹುನಕುಂಟಿ, ಕಸಬಾ ಲಿಂಗಸುಗೂರು, ಕರಡಕಲ್ಲ ಹಾಗೂ 2ನೇ ಹಂತದ ಗುಡದನಾಳ, ಸರ್ಜಾಪುರ, ಯಲಗಲದಿನ್ನಿ, ಹೊನ್ನಳ್ಳಿ, ಕಾಳಾಪುರ, ಕೋಠಾ, ಗೌಡೂರು, ದೇವರಭೂಪುರ, ಲೇಕಿಂಚೇರಿ ಗ್ರಾಮಗಳ ಜಮೀನುಗಳಿಗೆ ನೀರು ಹರಿದಿಲ್ಲ. ಇದರಿಂದ ರೈತರು ಚಿಂತೆಗೀಡಗಿದ್ದಾರೆ.
ಹಲವು ವರ್ಷಗಳಿಂದ ನವಲಿ, ಆನೆಹೊಸೂರು ಪಂಪ್‌ಹೌಸ್‌ನಲ್ಲಿ ಅಳವಡಿಸಿರುವ ಮೂರು ಮೋಟಾರುಗಳ ಪೈಕಿ ಪ್ರತಿ ಪಂಪ್‌ಹೌಸ್‌ನಿಂದ ಎರಡು ಚಾಲೂ ಸ್ಥಿತಿಯಲ್ಲಿರಬೇಕಿತ್ತು. ಇವುಗಳಲ್ಲಿ ಎರಡು ಮೋಟಾರು ಪಂಪ್‌ಗಳು ಕೆಟ್ಟಿದ್ದು, ಈವರೆಗೆ ರಿಪೇರಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ರೈತರಿಗೆ ಸಮರ್ಪಕ ನೀರು ಹರಿಸಲಾಗುತ್ತಿಲ್ಲ. ಭಾನುವಾರ ಪಟ್ಟಣದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಾಗ ಮೋಟಾರು ಪಂಪ್‌ಗಳ ದುರಸ್ತಿಗೆ ಮೂರು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಬರುತ್ತಿಲ್ಲವೆಂದು ಕೆಬಿಜೆಎನ್‌ಎಲ್ ಇಇ ಸುರೇಂದ್ರ ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದರು.
ರಾಂಪುರ ಯೋಜನೆಯ ಎರಡನೇ ಹಂತದ ಕಾಲುವೆಗಳಿಗೆ ಈವರೆಗೆ ನೀರು ಹರಿಸಿಲ್ಲ. ನಾಲೆಯನ್ನು ನಂಬಿ ಬಿತ್ತನೆ ಮಾಡಿದ್ದು, ಸದ್ಯ ನೀರಿಲ್ಲದೆ ಬೆಳೆ ಒಣಗುವ ಆತಂಕ ಕಾಡುತ್ತಿದೆ. | ಆದಪ್ಪ ಕಚಕನೂರು ಗುಡದನಾಳ ರೈತ
ನವಲಿ ಪಂಪ್‌ಹೌಸ್‌ನಲ್ಲಿ ಎರಡು ಮೋಟಾರುಗಳು ಚಾಲೂ ಸ್ಥಿತಿಯಲ್ಲಿವೆ. ಆನೆಹೊಸೂರಲ್ಲಿ ಒಂದು ಮೋಟಾರು ಕೆಲಸ ಮಾಡುತ್ತಿದ್ದು, ಇನ್ನೊಂದನ್ನು ತ್ವರಿತವಾಗಿ ದುರಸ್ತಿಗೊಳಿಸುವ ಮೂಲಕ ನಾಲೆಗಳಿಗೆ ಸಮರ್ಪಕ ನೀರು ಹರಿಸಲಾಗುವುದು. | ಚಂದ್ರಕಾಂತ ಎಇಇ, ರಾಂಪುರ ಏತ ನೀರಾವರಿ