

ಲಿಂಗಸುಗೂರು: ಹದಗೆಟ್ಟ ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳನ್ನು ದುರಸ್ತಿ ಮಾಡಲು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಸಹಾಯಕ ಆಯುಕ್ತ ಕಚೇರಿಯ ಗ್ರಾಮ ಆಡಳಿತಾಧಿಕಾರಿ ದೃವ ದೇಶಪಾಂಡೆಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಲಿಂಗಸುಗೂರಿನ ಗಡಿಯಾರ ವೃತ್ತದಿಂದ ಬಸವಸಾಗರ ವೃತ್ತ, ಪಶು ಆಸ್ಪತ್ರೆಯಿಂದ ಗಡಿಯಾರ ವೃತ್ತ, ಅಮರೇಗೌಡ ಮಕ್ಕಳ ಆಸ್ಪತ್ರೆಯಿಂದ ವಿಸಿಬಿ ಕಾಲೇಜು ರಸ್ತೆ, ಸರ್ಕಾರಿ ಆಸ್ಪತ್ರೆಯ ರಸ್ತೆ ಸೇರಿದಂತೆ ವಿವಿಧ ಕಾಲನಿಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ವಾಹನ ಸವಾರರು ರಸ್ತೆ ಗುಂಡಿಗಳಿಂದ ತೊಂದರೆ ಪಡುವಂತಾಗಿದೆ. ಹಲವು ಕಡೆ ಮರಂ ಹಾಕಿರುವುದಾಗಿ ಬಿಲ್ ಪಾವತಿ ಮಾಡಿಕೊಂಡಿದ್ದಾರೆ. ಆದರೆ ಕಾಮಗಾರಿ ನಡೆಸಿಲ್ಲ. ಸಾರ್ವಜನಿಕರಿಂದ ಕರ ವಸೂಲಿ ಮಾಡುವ ಪುರಸಭೆ ರಸ್ತೆ ರಿಪೇರಿ ಮಾಡಲು ಕನಿಷ್ಠ ಸೌಜನ್ಯ ತೋರಿಸಿಲ್ಲ. ಪುರಸಭೆ ವ್ಯಾಪ್ತಿಯ ಲೇಔಟ್‌ಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗಗಳನ್ನು ಗುರುತಿಸಿ ತಂತಿ ಬೇಲಿ ಹಾಕಿ ಪುರಸಭೆ ಜಾಗ ಎಂಬುದಾಗಿ ನಾಮಫಲಕ ಹಾಕಬೇಕು. ಬೇಡಿಕೆ ಈಡೇರಿಸದಿದ್ದರೆ ತಾಲೂಕು ಆಡಳಿತ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದ ಗುಡದನಾಳ, ನೀರಲಕೇರಾ, ಅಂಕನಾಳ, ಉಪನಾಳ, ಅಂಕಲಿಮಠ, ಅನ್ವರಿ, ಗೌಡೂರು, ಜಾಲಿಬೆಂಚಿ, ಗೊರೇಬಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ದುರಸ್ತಿ ಮಾಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಪ್ರಮುಖರಾದ ರಮೇಶ ಗುತ್ತೇದಾರ, ರವಿ ಗೊರೇಬಾಳ, ಬಸವರಾಜ ಕಕ್ಕೇರಿ, ಯಲ್ಲಪ್ಪ ಬಂಡಿ, ಸಚಿನ್ ರಾಠೋಡ, ಶ್ರೀನಿವಾಸರೆಡ್ಡಿ ಮುನ್ನೂರು, ಪ್ರವೀಣ ಕುಮಾರ, ದೇವರಾಜ ಉಪ್ಪಾರ, ಸೋಮನಾಥ ಗೊರೇಬಾಳ, ರಮೇಶ ನಾಯಕ, ಸಚಿನ್ ಗುತ್ತೇದಾರ, ಆಕಾಶ, ಅಶೋಕ ಗಸ್ತಿ, ಅಮರ್ ಇದ್ದರು.