

ಲಿಂಗಸುಗೂರು: ಪಟ್ಟಣ ಸೇರಿದಂತೆ ರಾಜ್ಯದ ಹಲವು ಪುರಸಭೆಗಳಿಂದ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳು ಬಂದಿವೆ. ಲಿಂಗಸುಗೂರು ಪುರಸಭೆ ಪ್ರಸ್ತಾವನೆ ಪರಿಶೀಲಿಸಿ ಮೇಲ್ದರ್ಜೆಗೇರಿಸಲು ಹಣಕಾಸು ಇಲಾಖೆ ಒಪ್ಪಿಗೆ ಪಡೆದು ನಗರಸಭೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ರಹೀಂಖಾನ್ ಭರವಸೆ ನೀಡಿದರು.
ಪಟ್ಟಣದ ಎಂಎಲ್ಸಿ ಕಾರ್ಯಾಲಯದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಒಪ್ಪಿಗೆ ಪಡೆದು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧ ಪಟ್ಟಣ, ನಗರ ಪ್ರದೇಶಗಳಲ್ಲಿ ಬಡವರು ಅನಧಿಕೃತ ನಿವೇಶನಗಳನ್ನು ಖರೀದಿಸಿದ್ದು, ಅವರ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಎ-ಖಾತಾ, ಬಿ-ಖಾತಾ ಯೋಜನೆ ಜಾರಿಗೆ ತಂದಿದ್ದು, ಬಡವರಿಗೆ ಶಾಶ್ವತ ನಿವೇಶನ ಖಾತೆ ಹೊಂದಲು ಸಾಧ್ಯವಾಗಿದೆ ಎಂದರು.
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಹಣದ ಕೊರತೆಯಿಲ್ಲ. ಮುದಗಲ್, ಲಿಂಗಸುಗೂರು ಪಟ್ಟಣಗಳ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡಲಾಗುವುದು. ಪಟ್ಟಣದ ಲೇಔಟ್‌ಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಾಗಿದ್ದ ಜಾಗ ಹಾಗೂ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮವಹಿಸುವಂತೆ ಡಿಸಿ ಗಮನಕ್ಕೆ ತರಲಾಗುವುದು ಎಂದು ಸಚಿವ ತಿಳಿಸಿದರು.
ನಗರೋತ್ಥಾನ ಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಹಳೆಯ ಕಾಮಗಾರಿಗಳ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಪುರಸಭೆ, ನಗರಸಭೆಗಳಿಗೆ ಘನ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಟಿಎಪಿಎಂಎಸ್ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ, ಪುರಸಭೆ ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಪುರಸಭೆ ಸದಸ್ಯ ಪ್ರಮೋದ ಕುಲಕರ್ಣಿ, ಸೋಮನಾಥ ರೆಡ್ಡಿ, ಸೋಮಶೇಖರ ಐದನಾಳ, ಚನ್ನಾರೆಡ್ಡಿ ಬಿರಾದಾರ ಇದ್ದರು.