

ಲಿಂಗಸುಗೂರು: ಪಟ್ಟಣದಲ್ಲಿನ ರಸ್ತೆ ದುರಸ್ತಿ ಮಾಡಲು ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಇಲ್ಲಿನ ಪುರಸಭೆಯ ವ್ಯವಸ್ಥಾಪಕ ಹನುಮಂತರಾಯ ನಾಯಕಗೆ ಗುರುವಾರ ಮನವಿ ಸಲ್ಲಿಸಿದರು.
ಲಿಂಗಸುಗೂರಿನಲ್ಲಿ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶಗದ ರಸ್ತೆಗಳಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ದೇವರ ಮೆರವಣಿಗೆಯ ಸಮಯದಲ್ಲಿ ನೂರಾರು ಭಕ್ತರು ದೇವರ ದರ್ಶನ ಪಡೆಯಲು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಹದಗೆಟ್ಟ ರಸ್ತೆಯಲ್ಲಿ ಭಕ್ತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಆರಕ್ಷಕ ಉಪ ಅಧೀಕ್ಷಕರು ರಸ್ತೆಗಳ ದುರಸ್ತಿಗೆ ಸೂಚಿಸಿದ್ದರು. ಆದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ ಮೊಹರಂ ಹಬ್ಬಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯನ್ನು ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಅಧ್ಯಕ್ಷ ಹನುಮಂತ ನಾಯಕ, ಪ್ರಮುಖರಾದ ಪ್ರಕಾಶ ಕುರಿ, ಲಿಂಗಪ್ಪ ರಾಮಲೂಟಿ, ಪ್ರವೀಣ ನಿಲೋಗಲ್, ರಾಯಪ್ಪ ನಾಯಕ, ಶಿವರೆಡ್ಡಿ, ಮಾಳಪ್ಪ ಐದಭಾವಿ, ಲಿಂಗರಾಜು, ಮಲ್ಲೇಶ ನಾಯಕ, ಬಸವರಾಜ ಡೆಡ್ಲಿ, ದುರುಗೇಶ ಕರಡಕಲ್ ಇತರರಿದ್ದರು.