ಲಿಂಗಸುಗೂರು ಮುಂಗಾರು ಕೃಷಿ ಚಟುವಟಿಕೆ ಜೋರು

lingsuguru rain
ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವುದು.
Published on

ಲಿಂಗಸುಗೂರು: ಪ್ರಸಕ್ತ ಮುಂಗಾರು ಆರಂಭದಲ್ಲಿಯೇ ವರುಣ ಕೃಪೆ ತೋರಿದ್ದು, ತಾಲೂಕಾದ್ಯಂತ ವಾಡಿಕೆಗಿಂತ ಉತ್ತಮ ಮಳೆ ಸುರಿದಿದೆ. ಇದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ಈ ಬಾರಿ 26,280 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿದೆ.

ತಾಲೂಕಿನಲ್ಲಿ ನೀರಾವರಿ 17 ಸಾವಿರ ಹಾಗೂ ಖುಷ್ಕಿ 44,444 ಹೆಕ್ಟೇರ್ ಸೇರಿ ಒಟ್ಟು 61,444 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಅವಕಾಶವಿದ್ದು, ನಾರಾಯಣಪುರ ಬಲದಂಡೆ, ರಾಂಪುರ ಏತನೀರಾವರಿ ನಾಲೆಗಳಿಗೆ ನೀರು ಹರಿಸಿದರೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತ ಬೆಳೆಯಲು ಮುಂದಾಗುತ್ತಾರೆ. ಭತ್ತ 6500 ಹೆಕ್ಟೇರ್, ನೀರಾವರಿ ಮತ್ತು ಖುಷ್ಕಿ ಸೇರಿ ಹೈಬ್ರಿಡ್ ಜೋಳ 1500 ಹೆ., ಮೆಕ್ಕೆಜೋಳ 150 ಹೆ., ಹೈಬ್ರಿಡ್ ಸಜ್ಜೆ 20 ಸಾವಿರ ಹೆ., ನವಣೆ 150 ಹೆ., ಹೆಸರು 25 ಹೆ., ಸೂರ್ಯಕಾಂತಿ 5120 ಹೆ., ಎಳ್ಳು 344 ಹೆ., ಹತ್ತಿ 1250 ಹೆ., ಕಬ್ಬು 100 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಲಿಂಗಸುಗೂರು, ಗುರುಗುಂಟಾ, ಮುದಗಲ್ ಹೋಬಳಿ ವ್ಯಾಪ್ತಿಯ ರೈತರು ಈಗಾಗಲೇ ಬಿತ್ತನೆಗೆ ಭೂಮಿ ಹದಗೊಳಿಸಿ, ಜಮೀನಿಗೆ ಸೆಗಣಿ ಮತ್ತು ಕುರಿ ಹಿಕ್ಕೆ ಗೊಬ್ಬರ ಹರಗಿ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾರ್ಯ ಬಹುತೇಕ ಪೂರ್ಣಗೊಳಿಸಿದ್ದಾರೆ.

ಪ್ರಸಕ್ತ ವರ್ಷ ಹವಾಮಾನ ಇಲಾಖೆ ಮಾಹಿತಿಯಂತೆ ಏಪ್ರಿಲ್‌ನಲ್ಲಿ 22.4 ಮಿಮೀ ವಾಡಿಕೆಗಿಂತ 47.9 ಮಿಮೀ (ಶೇ 114) ಹಾಗೂ ಮೇನಲ್ಲಿ 37.9 ಮಿಮೀ ವಾಡಿಕೆ ಮಳೆಗಿಂತ 144 ಮಿಮೀ (ಶೇ.280) ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.

ಇದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ಲಿಂಗಸುಗೂರು, ಗುರುಗುಂಟಾ, ಮುದಗಲ್ ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೆ ತೊಗರಿ 389 ಕ್ವಿಂ. ದಾಸ್ತಾನಿನಲ್ಲಿ ಈಗಾಗಲೇ 228 ಕ್ವಿಂ. ಮಾರಾಟವಾಗಿದೆ. ಸಜ್ಜೆ 10 ಕ್ವಿಂ. ದಾಸ್ತಾನಿನಲ್ಲಿ 1.35 ಕ್ವಿಂ. ಮಾರಾಟವಾಗಿದೆ. ಸೂರ್ಯಕಾಂತಿ 7 ಕ್ವಿಂ. ಮತ್ತು ಭತ್ತ 20 ಕ್ವಿಂ. ದಾಸ್ತಾನಿದೆ. ರೈತರು ಬಿತ್ತನೆ ಬೀಜ ಖರೀದಿ ಮತ್ತು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net