

ಲಿಂಗಸುಗೂರು: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಸವ ಸಭಾಭವನದಲ್ಲಿ ಡಿ.21 ರಿಂದ ಜ.1 ರವರೆಗೆ ವ್ಯಾಸ ಪ್ರಣೀತ ಆನ್ವಯಿಕ ಮಹಾಭಾರತ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಡಿ.21 ರಂದು ಸಂಜೆ 5.30 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಮಹಾಭಾರತ ಸಾರ್ವಕಾಲಿಕ ಸತ್ಯದರ್ಶನ ವಿಷಯ ಮಂಡನೆ ನಡೆಯಲಿದೆ. ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ವಿದ್ವಾನ್ ಜಗದೀಶ ಶರ್ಮಾ, ವಿದ್ವಾನ್ ಬಿಂದುಮಾಧವಾಚಾರ್ಯ, ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಇತರರು ಭಾಗವಹಿಸಲಿದ್ದಾರೆ ಎಂದರು.
ಡಿ.22 ರಂದು ಭೀಷ್ಮಾಚಾರ್ಯ ಪ್ರತಿಜ್ಞೆ ಮತ್ತು ಪರಿಣಾಮ, ಡಿ.23 ರಂದು ದ್ರೋಣಾಚಾರ್ಯ ಪಾರಂಗತನ ದುಡುಕು-ಕೆಡಕು, ಡಿ.24 ರಂದು ಗಾಂಧಾರಿ ಮತ್ತು ಕುಂತಿ ವೇದನೆ ಮತ್ತು ಮಾನಸಿಕ ತುಮುಲ, ಡಿ.25 ರಂದು ಧರ್ಮರಾಯ ಗೆಲುವಿನಲ್ಲಿ ಸೋಲುಂಡವ ವಿಶ್ಲೇಷಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಿ.26 ರಂದು ಕರ್ಣ ದಾನದಾಪ್ತ-ಸ್ನೇಹದ ಅರಸ, ಡಿ.27 ರಂದು ಭೀಮಸೇನ ದೈತ್ಯ ದೇಹಿ-ಶ್ರೀಮಂತ ಹೃದಯಿ, ಡಿ.28 ರಂದು ಅರ್ಜುನ ಯುದ್ಧಕಾಂಡ-ಕೃಷ್ಣಪ್ರೀತ, ಡಿ.29 ರಂದು ಕೃಷ್ಣ ಪ್ರಮಕಾರಣಿ, ಡಿ.30 ರಂದು ದುರ್ಯೋಧನ ಚತುರ ತಂತ್ರದ ಪ್ರತಿನಾಯಕ, ಡಿ.31 ರಂದು ವಿದುರ ಮತ್ತು ಕನಿಕ ನೀತಿ ಮತ್ತು ನಿಲುವುಗಳ ಕುರಿತು ವಿಶ್ಲೇಷಣೆ. ಜ.1 ರಂದು ಜ್ಞಾನಯೋಗಾಶ್ರಮದ ಲಿಂ.ಸಿದ್ಧೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಬಸವಂತರಾಯ ಕುರಿ ತಿಳಿಸಿದರು. ಪ್ರಮುಖರಾದ ಮಹಾಂತೇಶ ಮಸ್ಕಿ, ಸಿ.ಬಿ.ಚಿಲ್ಕರಾಗಿ, ರಮೇಶ ಶಾಸ್ತ್ರಿ, ಶರಣಗೌಡ ಬಸ್ಸಾಪುರ ಇತರರಿದ್ದರು.