

ಲಿಂಗಸುಗೂರು: ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಮನೆ, ಅಂಗಡಿಗಳ ಬಾಗಿಲಿನ ಬೀಗ ಮುರಿದ ಕಳ್ಳರು ಲಕ್ಷಾಂತರ ರೂ. ಮೊತ್ತದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ಲಿಂಗಸುಗೂರು ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಕರಡಕಲ್ಲ ಗ್ರಾಮದಲ್ಲಿ ಗುಂಡಯ್ಯಸ್ವಾಮಿ ಎನ್ನುವವರ ಮನೆಗೆ ನುಗ್ಗಿದ ಕಳ್ಳರು, 30 ಗ್ರಾಂ ಚಿನ್ನಾಭರಣ, 330 ಗ್ರಾಂ ಬೆಳ್ಳಿ ಹಾಗೂ 50 ಸಾವಿರ ನಗದು ಕದ್ದಿದ್ದಾರೆ. ಇದೇ ಗ್ರಾಮದ ರುದ್ರಯ್ಯಸ್ವಾಮಿ ಎನ್ನುವರ ಮನೆಯಲ್ಲಿ 26 ಗ್ರಾಂ ಬಂಗಾರದ ಆಭರಣ, 65 ಸಾವಿರ ರೂ. ದೋಚಿದರೆ, ದೇವಮ್ಮ ಮಹಾಂತೇಶ ಎನ್ನುವವರ ಮನೆಯಲ್ಲಿ 300 ಗ್ರಾಂ ಚಿನ್ನಾಭರಣ, 50 ಸಾವಿರ ನಗದು ದೋಚಿದ್ದಾರೆ. ಶಬ್ಧ ಕೇಳಿ ಮಾಳಗಿ ಮೇಲೆ ಮಲಗಿದ್ದ ದೇವಮ್ಮ ಕೆಳಗೆ ಬಂದಿದ್ದು, ಕಳ್ಳರನ್ನು ಕಂಡು ಚೀರಿದ್ದಾರೆ. ಆದರೆ, ಮನೆಯ ಇತರ ಸದಸ್ಯರು ಏಳುವಷ್ಟರಲ್ಲಿ ನಾಲ್ಕೈದು ಜನರಿರುವ ಕಳ್ಳರ ತಂಡ ಬೈಕ್‌ನಲ್ಲಿ ಪರಾರಿಯಾಗಿದೆ.
ಬಳಿಕ ಕರಡಕಲ್ಲನಿಂದ 5 ಕಿಮೀ ದೂರದಲ್ಲಿರುವ ಈಚನಾಳ ತಾಂಡಾದಲ್ಲಿ ಉಮೇಶ ಎನ್ನುವವರ ಮನೆ ಬಾಗಿಲಿನ ಬೀಗ ಮುರಿದ ಕಳ್ಳರು 600 ಗ್ರಾಂ ಚಿನ್ನ, 85 ಸಾವಿರ ನಗದು ದೋಚಿದ್ದಾರೆ. ಅಲ್ಲದೆ ಹತ್ತಿರದ ಚಿತ್ತಾಪುರ ಗ್ರಾಮದಲ್ಲಿ ಎಸ್‌ಬಿಐ ಗ್ರಾಹಕ ಕೇಂದ್ರದ ಪ್ರಕಾಶ ಎನ್ನುವವರ ಅಂಗಡಿ ಬಾಗಿಲು ಮುರಿದು 1.45 ಲಕ್ಷ ನಗದು ಕದ್ದರೆ, ಇದೇ ಗ್ರಾಮದ ವಾಲ್ಮೀಕಿ ವೃತ್ತದ ಹತ್ತಿರದ ಅಂಗಡಿಯಲ್ಲಿ 1.24 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದು ಪಿಐ ಪುಂಡಲೀಕ ಪಟಾತ್ತರ್ ನೇತೃತ್ವದ ತಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂತಾರಾಜ್ಯ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣ ದಾಖಲಾಗಿದೆ.