

ಲಿಂಗಸುಗೂರು: ಎಲ್ಲ ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಆರೋಗ್ಯ ಸೇವೆಗಳನ್ನು ನೀಡುವುದೇ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ದೇಶ ಎಂದು ಕಲಬುರಗಿ ವಿಭಾಗದ ಎಸ್‌ಎಂಒ ಅಧಿಕಾರಿ ಡಾ. ಅನಿಲ್ ತಾಳಿಕೋಟಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು. ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ದಿನ ಗರ್ಭಿಣಿಯರು, ತಾಯಂದಿರು, ಮಕ್ಕಳು, ಕಿಶೋರಿಯರಿಗೆ ತಪಾಸಣೆ ಮಾಡಲಾಗುವುದು. ಚಿಕಿತ್ಸೆ, ಆರೋಗ್ಯ ಮಾಹಿತಿ, ಸಮಾಲೋಚನೆ ಹಮ್ಮಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ತಿ.ನರಸೀಪುರ- ಪೋಷಣ್ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆ.17 ರಿಂದ ಮಹಾತ್ಮ ಗಾಂಧಿ ಜಯಂತಿ ದಿನವಾದ ಅ.2ರವರೆಗೆ ಕೇಂದ್ರ-ರಾಜ್ಯ ಸರ್ಕಾರ ಸೂಚನೆಯಂತೆ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್, ಟಿಎಚ್‌ಒ ಡಾ.ಅಮರೇಶ ಪಾಟೀಲ್, ವೈದ್ಯರಾದ ಉಮಾಮಹೇಶ್ವರಿ, ಸಾಕ್ಷಿ, ಪವನಕುಮಾರ, ಶ್ವೇತಾ ನಡುವಿನಮನಿ, ಶಂಕರಾಚಾರ್ಯ, ಪ್ರಮುಖರಾದ ಪ್ರಾಣೇಶ ಜೋಶಿ, ಹನುಮಂತರಾಯ, ನ್ಯಾನ್ಸಿ, ನಾಗರತ್ನಾ, ರೋಸ್‌ಮೇರಿ, ರಾಘವೇಂದ್ರ, ಚಾರ್ಲಸ್, ಹುಚ್ಚಪ್ಪ, ರವಿಕುಮಾರ, ಇಲಿಯಾಸ್, ಸತ್ತಾರ ಪಾಷಾ ಇತರರಿದ್ದರು.