

ಲಿಂಗಸುಗೂರು: ತಾಲೂಕಿನ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಪಟ್ಟಣದಲ್ಲಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಗುರುಂಟಾ ಭಾಗದ ದೊಡ್ಡಿಗಳಿಗೆ 2017-18ರಲ್ಲಿ ವಿದ್ಯುತ್ ನೀಡುವುದಾಗಿ ಮೀಟರ್ ಅಳವಡಿಸಲಾಗಿತ್ತು. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ನೀಡದಿದ್ದರೂ ಬಿಲ್ ಬಂದಿದ್ದು ರೈತರು ಕಂಗಲಾಗಿದ್ದಾರೆ. ವಿದ್ಯುತ್ ಬಳಸದೇ ಇದ್ದರೂ ಬಿಲ್ ಬಂದಿರುವುದು ಎಷ್ಟರ ಮಟ್ಟಿಗೆ ಸರಿ. ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇನ್ನು ಕೆಲವು ದೊಡ್ಡಿಗಳಲ್ಲಿ ವಿದ್ಯುತ್ ಕಂಬಗಳೇ ಇಲ್ಲ. ಆದರೂ ಸಹ ಮನೆಗಳಿಗೆ ಮೀಟರ್ ಅಳವಡಿಸಿ ಗುತ್ತಿಗೆದಾರರ ಕೈತೊಳೆದು ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿ ಸಮಯದಲ್ಲಿ ವಿಷ ಜಂತುಗಳು ಕಡಿತದ ಪ್ರಕರಣಗಳು ಹೆಚ್ಚಾಗಿವೆ. ಇದರಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಲ್ಲಿಯವರೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸಮಸ್ಯೆಗೆ ಪರಿಹಾರವಾಗಿಲ್ಲ. ಬೇಡಿಕೆ ಈಡೇರಿಸದಿದ್ದರೆ ಏ.21ರಂದು ರೈತರ ಕುಟುಂಬಗಳು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಸಿದ್ದಾರೆ.