

ಲಿಂಗಸುಗೂರು: ಪ್ರಸಕ್ತ ವರ್ಷದ ಶಾಲೆಗಳು ಮೇ 29 ರಿಂದ ಆರಂಭಗೊಳ್ಳಲಿವೆ. ಮೇ 30 ರಂದು ತಾಲೂಕಿನಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಸಿರು ತೋರಣದಿಂದ ಶೃಂಗರಿಸಿ, ಸಿಹಿ ಊಟ ಬಡಿಸುವ ಜತೆಗೆ ಪಠ್ಯ ಪುಸ್ತಕ ವಿತರಿಸಲು ಶಿಕ್ಷಣ ಇಲಾಖೆ ಭರದ ಸಿದ್ಧತೆ ನಡೆಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಶಿಕ್ಷಣ ಸಂಯೋಜಕರು, ಬಿಆರ್‌ಪಿ, ಸಿಆರ್‌ಪಿ, ಮುಖ್ಯಶಿಕ್ಷಕರು ಶಾಲಾ ಆರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದು, ತರಗತಿಗಳು, ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳ ಸ್ವಚ್ಛಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ ದಾಸ್ತಾನು ಕೊಠಡಿಯಿಂದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಮೂಲಕ ತಾಲೂಕಿನ 353 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮತ್ತು 21 ಅನುದಾನಿತ ಶಾಲೆಗಳು, 112 ಅನುದಾನ ರಹಿತ ಶಾಲೆಗಳಿದ್ದು, ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಈಗಾಗಲೇ ಶೇ.75 ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ತಾಲೂಕುಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ, ಯುಕೆಜಿ ಮತ್ತು ದ್ವಿ ಭಾಷಾ ತರಗತಿಗಳನ್ನು ಆರಂಭಿಸಲಾಗಿದ್ದು, ಲಿಂಗಸುಗೂರು ತಾಲೂಕಿನಲ್ಲಿ 38 ಎಲ್‌ಕೆಜಿ, ಯುಕೆಜಿ ಮತ್ತು 35 ದ್ವಿ ಭಾಷಾ ಶಾಲೆಗಳು ಮತ್ತು 10 ಪ್ರೌಢಶಾಲೆಗಳಲ್ಲಿ ವೃತ್ತಿ ಶಿಕ್ಷಣ ಎನ್‌ಎಸ್‌ಕ್ಯುಎಫ್ ಆರಂಭಿಸಲಾಗುವುದು. ಪ್ರಸಕ್ತ ವರ್ಷ ಹೆಚ್ಚುವರಿಯಾಗಿ 36 ಎಲ್‌ಕೆಜಿ, ಯುಕೆಜಿ ಶಾಲೆ ಮಂಜೂರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮೇ 31 ರವರೆಗೆ ಶಾಲಾ ದಾಖಲಾತಿ ಆಂದೋಲನ ಮತ್ತು ನಂತರ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಇದರಿಂದ ಪಾಲಕರು ಹಾಗೂ ಮಕ್ಕಳಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಶಿಕ್ಷಣ ಇಲಾಖೆಗೆ ನೀಡಿದ ಮಾರ್ಗಸೂಚಿಯಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದೆ.