

ಲಿಂಗಸುಗೂರು: ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಮಯ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ಶುಕ್ರವಾರ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯವನ್ನು ಏ.1 ರಿಂದ ಮೇ 31ರವರೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1:30 ಗಂಟೆವರೆಗೆ ನಿಗದಿಪಡಿಸಲಾಗಿದೆ. ಬಹುತೇಕ ಇಲಾಖೆಗಳ ಡಿ ದರ್ಜೆ ನೌಕರರು ಮಾತ್ರ ಸಮಯಕ್ಕೆ ಹಾಜರಿರುತ್ತಾರೆ. ಪಿಡಬ್ಲುೃಡಿ, ಕೆಆರ್‌ಐಡಿಎಲ್, ಜಿಪಂ, ಅರಣ್ಯ, ಅಕ್ಷರ ದಾಸೋಹ, ಸಿಡಿಪಿಒ, ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮಯ ಪಾಲನೆ ಮಾಡುತ್ತಿಲ್ಲ. ಬೆಳಗ್ಗೆ 10 ಗಂಟೆಗೆ ಬರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.