

ಲಿಂಗಸುಗೂರು: ಈಗ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ನೀಡಿದ್ದು, ಮಕ್ಕಳು ಹೆಚ್ಚಾಗಿ ಆಟೋಟಗಳಲ್ಲಿ ತೊಡಗಿದ್ದಾರೆ. ಚಿಣ್ಣರನ್ನು ಖುಷಿಪಡಿಸಲು ಪಟ್ಟಣಕ್ಕೆ ಸೊಲ್ಲಾಪುರದಿಂದ ಒಂಟೆಗಳು ಲಗ್ಗೆ ಇಟ್ಟಿದ್ದು, ಅದರ ಮೇಲೆ ಸವಾರಿ ಮಾಡಿ ಸಂಭ್ರಮಿಸುತ್ತಿದ್ದಾರೆ.
ಬೇಸಿಗೆ ಬಂತೆಂದರೆ ರಜೆ ದಿನಗಳು ಆರಂಭವಾಗುತ್ತವೆ. ಈ ವೇಳೆ ಕೆಲವರು ಸ್ವಗ್ರಾಮ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ತೆರಳುತ್ತಾರೆ. ಇನ್ನು ಕೆಲವರು ಕಾರಣಾಂತರಗಳಿಂದ ಎಲ್ಲಿಯೂ ತೆರಳಲಾಗದೆ ಇದ್ದೂರಲ್ಲಿಯೇ ಉಳಿಯುತ್ತಾರೆ. ಬೇಸಿಗೆ ಸಮಯದಲ್ಲಿ ಮಕ್ಕಳು ರಜಾ ದಿನಗಳನ್ನು ಕಳೆಯಲು ಬಿರು ಬಿಸಿಲು ಲೆಕ್ಕಿಸದೆ ಖಷಿಯಿಂದ ಈಜು ಸೇರಿ ವಿವಿಧ ಕ್ರೀಡೆಗಳನ್ನು ಆಡುತ್ತಾರೆ. ಇನ್ನು ಕೆಲ ಮಕ್ಕಳು ಕಂಪ್ಯೂಟರ್, ಪಾಠ-ಪ್ರವಚನ, ಕೋಚಿಂಗ್ ಸೆಂಟರ್‌ಗೆ ತೆರಳುತ್ತಾರೆ. ಆದರೆ ಬೇಸಿಗೆ ರಜೆ ದಿನಗಳನ್ನೇ ಕಾಯುವ ವ್ಯಾಪಾರಿಗಳು ಮನರಂಜನೆ, ಸರ್ಕಸ್, ಎಕ್ಸಿಬಿಷನ್, ಒಂಟೆ, ಕುದುರೆ, ಕರಡಿ ಸೇರಿದಂತೆ ಅನೇಕ ರೀತಿಯಲ್ಲಿ ಪಟ್ಟಣಕ್ಕೆ ಲಗ್ಗೆ ಇಡುತ್ತಾರೆ.
ಅದರಂತೆ ಸೊಲ್ಲಾಪುರದಿಂದ ಹೊಟ್ಟೆ ಪಾಡಿಗಾಗಿ ಲಿಂಗಸುಗೂರು ಪಟ್ಟಣಕ್ಕೆ ಆರೇಳು ಒಂಟೆಗಳನ್ನು ತಂದಿದ್ದು, ವಿವಿಧ ಬಡಾವಣೆಗಳಿಗೆ ತೆರಳಿ ಚಿಣ್ಣರನ್ನು ಒಂಟೆಯ ಮೇಲಿ ಸವಾರಿ ಮಾಡಿಸಿ ಹಣ ಗಳಿಸುತ್ತಿದ್ದಾರೆ. ಮಕ್ಕಳು ಖಷಿಯಿಂದ ಸವಾರಿ ಮಾಡುತ್ತಿದ್ದಾರೆ. ಮಕ್ಕಳನ್ನು ಒಂಟೆಗಳ ಮೇಲೆ ಕುಳ್ಳಿರಿಸಿ ಆಯಾ ಬಡಾವಣೆಯ ಸುತ್ತ ಸವಾರಿ ನಡೆಸಿದರೆ ಒಂದು ಮಗುವಿಗೆ 30 ರೂ. ಪಡೆಯುತ್ತಾರೆ. ಪಾಲಕರು ಮಕ್ಕಳನ್ನು ಒಂಟೆ ಸವಾರಿ ನಡೆಸಿ ಖುಷಿ ಪಡುವ ದೃಶ್ಯ ಸಾಮಾನ್ಯವಾಗಿದೆ.