

ಲಿಂಗಸುಗೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನ ಉತ್ತೇಜಿಸಲು ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮೀ ಯೋಜನೆಯಡಿ ತಾಲೂಕಿನ 1024 ಫಲಾನುಭವಿಗಳು ಸಂಪೂರ್ಣ ಮೊತ್ತ ಪಡೆಯಲು ಅರ್ಹರಾಗಿದ್ದಾರೆ.
ಈ ಹಿಂದೆ 2006-07ರ ಆಯವ್ಯಯದಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೆೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮೀ ಎಂಬ ಹೊಸ ಕಲ್ಯಾಣ ಯೋಜನೆ ಜಾರಿಗೆ ತಂದು 18 ವರ್ಷಗಳ ಬಳಿಕ ಹೆಣ್ಣು ಮಕ್ಕಳು ಇದರ ಲಾಭ ಪಡೆಯಲಿದ್ದಾರೆಂದು ಘೋಷಿಸಿದ್ದರು.
ಭಾಗ್ಯಲಕ್ಷ್ಮೀ ಯೋಜನೆಯನ್ನು ಆರ್ಥಿಕ ಪಾಲುದಾರ ಸಂಸ್ಥೆ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಸಹಯೋಗದೊಂದಿಗೆ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿತ್ತು.
2006ರ ಮಾ.31ರ ಬಳಿಕ ಬಿಪಿಎಲ್ ಕಾರ್ಡ್‌ದಾರರ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಪಾಲಕರಿಗೆ ಯೋಜನೆಯ ಬಾಂಡ್‌ಗಳನ್ನು ವಿತರಿಸಲಾಗಿತ್ತು. ಈಗ ಅದು ಪ್ರೌಢಾವಸ್ಥೆ ತಲುಪಿದೆ.
ಮೆಚ್ಯುರಿಟಿ ಮೊತ್ತ: ಬಿಪಿಎಲ್ ಕಾರ್ಡ್‌ದಾರರ ಕುಟುಂಬದಲ್ಲಿ 2006ರ ಮಾ.31ರಿಂದ 2008 ಜು. 31ರವರೆಗೆ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿಡಲಾದ 10 ಸಾವಿರ ರೂ. ಠೇವಣಿಯು 18 ವರ್ಷಗಳ ಬಳಿಕ ಪರಿಪಕ್ವ ಮೊತ್ತ ಒಂದನೇ ಮಗುವಿಗೆ 34,751 ರೂ. ಹಾಗೂ ಎರಡನೇ ಮಗುವಿಗೆ 40,069 ರೂ. ಆಗಿದೆ. 2008ರ ಆ.1ರ ನಂತರ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ 19,300 ರೂ. ಠೇವಣಿಯೊಂದಿಗೆ 18 ವರ್ಷದ ಬಳಿಕ 1,00,052 ರೂ. ಹಾಗೂ ಎರಡನೇ ಮಗುವಿಗೆ 1,00,097 ರೂ. ಹಣ ಖಾತೆಗೆ ಜಮಾ ಆಗಲಿದೆ.
ಯೋಜನೆ ಮಾರ್ಪಾಡು: 2021-22 ನೇ ಸಾಲಿನಿಂದ ಭಾಗ್ಯಲಕ್ಷ್ಮೀ ಯೋಜನೆ ಮಾರ್ಪಾಡು ಹೊಂದಿ ಬಿಪಿಎಲ್ ಕುಟುಂಬಕ್ಕೆ ಸುಕನ್ಯಾ ಸಮೃದ್ಧಿ ಭಾಗ್ಯಲಕ್ಷ್ಮೀ ಯೋಜನೆ ಎಂದು ಮರುನಾಮಕರಣಗೊಂಡಿದೆ. ಇದರಡಿ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ವಾರ್ಷಿಕ 3000 ರೂ. ನಂತೆ 21 ವರ್ಷಗಳ ಠೇವಣಿ ಮಾಡಲಾಗುತ್ತದೆ. 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ 1,27,327 ರೂ. ಫಲಾನುಭವಿ ಖಾತೆಗೆ ಜಮೆಯಾಗುತ್ತದೆ.
ಅಂಗನವಾಡಿ ಸಿಬ್ಬಂದಿಯಿಂದ ದೃಢೀಕರಣ
ಹೆಣ್ಣು ಮಕ್ಕಳನ್ನು ಬಾಲ್ಯವಿವಾಹ ಅಥವಾ ಬಾಲಕಾರ್ಮಿಕ ಪದ್ಧತಿಗೆ ಒಳಪಡಿಸಬಾರದು. ಪಾಲಕರು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬಾರದು. ಒಂದು ವೇಳೆ ಹೆಣ್ಣು ಮಗು ಠೇವಣಿಯ ಪರಿಪಕ್ವಕ್ಕಿಂತ ಮೊದಲು ಮೃತಪಟ್ಟಿದ್ದರೆ ಯೋಜನೆ ಅನ್ವಯವಾಗುವುದಿಲ್ಲ. ಈ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿ ಮಾಹಿತಿ ದೃಢೀಕರಿಸುತ್ತಾರೆ.
========
ಲಿಂಗಸುಗೂರು ತಾಲೂಕಿನಲ್ಲಿ ಮೊದಲ ಬಾರಿಗೆ 1024 ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮೀ ಯೋಜನೆಯಡಿ ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿದ್ದಾರೆ. ಈವರೆಗೆ 717 ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿದೆ. ಹೆಣ್ಣು ಮಗುವಿನ ಜನನ ಉತ್ತೇಜಿಸಲು, ಅವರಿಗೆ ಶಿಕ್ಷಣ ದೊರಕಿಸಿಕೊಡಲು ಈ ಯೋಜನೆ ಅನುಕೂಲವಾಗಿದೆ.
> ಬಸಮ್ಮ, ಹಿರಿಯ ಮೇಲ್ವಿಚಾರಕಿ, ಸಿಡಿಪಿಒ ಕಚೇರಿ, ಲಿಂಗಸುಗೂರು
========
ವಿಸಿಬಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಭಾಗ್ಯಲಕ್ಷ್ಮೀ ಯೋಜನೆ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹಳಷ್ಟು ಅನುಕೂಲವಾಗಿದೆ. ಈ ಯೋಜನೆ ಹಣ ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತೇನೆ.
> ಶಬಾನಾ ದಿನ್ನಿಭಾವಿ, ಯೋಜನೆಯ ಫಲಾನುಭವಿ