

ಲಿಂಗಸುಗೂರು: ಆಧುನಿಕತೆ ಯುಗದಲ್ಲಿ ಜಾತಿ, ಧರ್ಮಗಳ ಸಂಘರ್ಷದ ಸಂಕ್ರಮಣ ಕಾಲಘಟ್ಟದಲ್ಲಿ ಅವರವರ ಧರ್ಮ, ಜಾತಿಗೆ ಮನ್ನಣೆ ದೊರೆಯಬೇಕೆಂದು ಒಂದಿಲ್ಲೊಂದು ಹೋರಾಟ ಕಾಣುತ್ತಿದ್ದೇವೆ. ಜಗತ್ತಿನ ಎಲ್ಲ ಧರ್ಮಗಳ ಗುರಿ ಮಾನವನ ಕಲ್ಯಾಣವೇ ಹೊರತು ವೈಯಕ್ತಿ ಹಿತಾಸಕ್ತಿಯಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸರ್ಜಾಪುರ ಗ್ರಾಮದಲ್ಲಿ ಬ್ರಹ್ಮ ವಿದ್ಯಾಶ್ರಮದ ಹನುಮಯ್ಯ ತಾತ ಅವರ 175 ದಿನಗಳ ಮೌನಾನುಷ್ಠಾನ ಮಂಗಲ ಸಮಾರಂಭದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಗುರುವಾರ ಆಶೀರ್ವಚನ ನೀಡಿದರು. ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಮಗ್ರ ಪರಿಕಲ್ಪನೆಯೊಂದಿಗೆ ಎಲ್ಲ ವರ್ಗದ ಜನಾಂಗಕ್ಕೆ ಸಮನ್ವಯ ಸಾಮರಸ್ಯದ ಸಂದೇಶವನ್ನು ಪ್ರಾಚೀನ ಕಾಲದಿಂದ ಬೋಧನೆ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಮಾನವ ಧರ್ಮ ಉಳಿಸಿ ಬೆಳೆಸದಿದ್ದರೆ ಸಮಾಜದಲ್ಲಿ ಸಂಘರ್ಷಗಳು, ಆಂತರಿಕ ತೊಂದರೆ ತಾಪತ್ರಯಗಳು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರವರ ಧರ್ಮ, ಜಾತಿ ಅವರವರಿಗೆ ಶ್ರೇಷ್ಠವಾಗಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ನಾವೆಲ್ಲ ಸಾಮರಸ್ಯದಿಂದ ಬದುಕಿ ಬಾಳಿದರೆ ಮಾತ್ರ ಆರೋಗ್ಯಕರ ಸಮಾಜ ಮತ್ತು ನಾಡಿನ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಧರ್ಮ ಮತ್ತು ಜಾತಿಗೆ ಭೂಮಿ- ಆಕಾಶದಷ್ಟು ಅಂತರವಿದೆ ಎಂಬ ಸೂಕ್ಷ್ಮತೆ ಅರಿಯಬೇಕಿದೆ ಎಂದು ಹೇಳಿದರು.
ಬದುಕಿನಲ್ಲಿ ಶ್ರೇಯಸ್ಸು ಕಾಣುವವರಿಗೆ ಧರ್ಮ ಮಾರ್ಗ ಅವಶ್ಯವಾಗಿದ್ದು, ನುಡಿದಂತೆ ನಡೆ ಇಲ್ಲದಿದ್ದರೆ ಸಮಾಜದಲ್ಲಿ ಅರಾಜಕತೆ, ಅಶಾಂತಿಯ ವಾತಾವರಣ ನಿರ್ಮಾಣ ವಾಗಲಿದೆ. ವೀರಶೈವ ಧರ್ಮ ಎಲ್ಲ ಧರ್ಮಗಳ ಸ್ವಾರಸ್ಯವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಎಲ್ಲರನ್ನು ಅಪ್ಪಿಕೊಂಡು ಬೆಳೆದುಬಂದಿದೆ. ಜೈನರ ಅಹಿಂಸೆ, ಬೌದ್ಧರ ಸಮತೆ, ಕ್ರೈಸ್ತರ ಕರುಣೆ, ಇಸ್ಲಾಮರ ನಿಷ್ಠೆ, ಆರ್ಯರ ಜ್ಞಾನ, ದ್ರಾವಿಡರ ಭಕ್ತಿ ಇವೆಲ್ಲ ವೀರಶೈವ ಧರ್ಮದಲ್ಲಿ ಸಂಗಮವಾಗಿವೆ. ವಿರೋಧ ರಹಿತವಾದ ಭಾವನೆಗಳನ್ನು ಹೊಂದಿದ ಧರ್ಮ ವೀರಶೈವ ಧರ್ಮವಾಗಿದೆ ಎಂದು ತಿಳಿಸಿದರು.
ಸಾರ್ವತ್ರಿಕ ಬದುಕಿನಲ್ಲಿ ಸಾಮಾಜಿಕ ಚಿಂತನೆಗಳ ಅರಿವು, ರಾಷ್ಟ್ರಪ್ರಜ್ಞೆ ಇಲ್ಲದೆ ಹೋದರೆ ಜೀವ ಜಗತ್ತು ಬಹಳಷ್ಟು ತಲ್ಲಣಗೊಳ್ಳಲಿದೆ. ಶ್ರೇಷ್ಠವಾದ ಮಾನವ ಜನ್ಮವನ್ನು ಶಿವಜ್ಞಾನ ಪ್ರಾಪ್ತಿಗಾಗಿ ಮತ್ತು ಗುರುಕಾರಣ್ಯಕ್ಕಾಗಿ ಸಮರ್ಪಿಸಿಕೊಂಡು ಮುನ್ನಡೆಯಬೇಕು. ಧರ್ಮ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಶ್ರೇಯಸ್ಸು ಮತ್ತು ಉತ್ತಮ ಫಲ ಪಡೆಯಲು ಸಾಧ್ಯ. ಧರ್ಮ ಪರಿಪಾಲನೆಯಿಂದ ದೂರ ಸರಿದವನಿಗೆ ಸಂಕಷ್ಟಗಳು ಎದುರಾಗಲಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯರು, ಮಿಟ್ಟಿಮಲ್ಕಾಪುರ ನಿಜಾನಂದ ಸ್ವಾಮೀಜಿ, ಮಾತಾ ನಂದಿಕೇಶ್ವರಿ ಅಮ್ಮ, ಸೋಮಶೇಖರಯ್ಯ ಸ್ವಾಮೀಜಿ, ಶರಣಯ್ಯ ತಾತ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರಮುಖರಾದ ಶ್ರೀನಿವಾಸ ಅಮ್ಮಾಪುರ, ವಿಕ್ರಂ ಪಾಟೀಲ್, ಪಾಮಯ್ಯ ಮುರಾರಿ, ಅಯ್ಯಪ್ಪ ವಕೀಲ, ಪಿಡಿಒ ಶೋಭಾರಾಣಿ ಇತರರಿದ್ದರು.
ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಸ್ತ್ರಗಳ ಭಯದಿಂದ ಮನುಷ್ಯ ಬದುಕಬೇಕು. ಆದರೆ ಇಂದಿನ ದಿನಗಳಲ್ಲಿ ಜನರಲ್ಲಿ ಶಾಸ್ತ್ರ ಮತ್ತು ಶಸ್ತ್ರಗಳ ಭಯ ಕಾಣುತ್ತಿಲ್ಲ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ಈ ನಾಡಿನ ಆಚಾರ್ಯರು, ಮಠಾಧೀಶರು, ಶರಣರು, ಸಂತ-ಮಹಾಂತರು ಬೋಧಿಸಿದ ಧರ್ಮದ ಆದರ್ಶ ಚಿಂತನೆಗಳು ಬದುಕಿಗೆ ದಾರಿದೀಪವಾಗಿವೆ. ಶೀಲವಿಲ್ಲದ ಶಿಕ್ಷಣ, ತ್ಯಾಗವಿಲ್ಲದ ಪೂಜೆ, ನೀತಿ ಹೀನ ವಾಣಿಜ್ಯ, ತತ್ವರಹಿತ ರಾಜಕೀಯ, ದುಡಿಮೆಯಿಲ್ಲದ ಸಂಪತ್ತು, ಆತ್ಮಶಾಂತಿ ಇಲ್ಲದ ಭೋಗ ಜೀವನ ನಿರರ್ಥಕವೆಂದು ಗಾಂಧೀಜಿ ಹೇಳಿದ್ದಾರೆ. ವಿಜ್ಞಾನ, ನಾಗರಿಕತೆ ಮತ್ತು ರಾಜಕೀಯ ಸಬಲ ಸಂಘರ್ಷದಲ್ಲಿ ಧರ್ಮ ಎಂದಿಗೂ ನಾಶವಾಗದಿರಲಿ ಎಂದು ಜಗದ್ಗುರುಗಳು ಸಾರಿದ್ದಾರೆ. ಬೆಳೆಯುತ್ತಿರುವ ವಿಜ್ಞಾನ, ಧರ್ಮದ ಸಹಯೋಗದಲ್ಲಿ ಬಳಕೆಯಾದರೆ ಜಗತ್ತಿಗೆ ಕಲ್ಯಾಣವಾಗಲಿದೆ. ಬೆಳೆಯುವಂತಹ ವಿಜ್ಞಾನ ಧರ್ಮದಿಂದ ದೂರವಾದರೆ ಸಮಾಜದಲ್ಲಿ ವಿಧ್ವಂಸಕ, ಭಯೋತ್ಪಾದನೆ ಕೃತ್ಯಗಳು ನಡೆದು ಅಶಾಂತಿ ಮತ್ತು ಅರಾಜಕತೆ ಸೃಷ್ಟಿಯಾಗಲಿದೆ. ಸಮಾಜದಲ್ಲಿ ನಾಗರಿಕತೆ ಬೆಳೆದಂತೆಲ್ಲ ನಮ್ಮ ಸಂಸ್ಕೃತಿ, ಆದರ್ಶ, ಪರಂಪರೆಗಳನ್ನು ಯಾರೂ ಮರೆಯಬಾರದು ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.