

ಲಿಂಗಸುಗೂರು: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಶಾಲೆಗಳು, ವಸತಿ ಶಾಲೆ, ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಶುಕ್ರವಾರ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಅನಧಿಕೃತ ಬೋಧನಾ ಶಾಲೆಗಳು ತಲೆ ಎತ್ತಿದ್ದು, ಶಾಲೆ ನಡೆಸಲು ಒಂದು ಪ್ರದೇಶದಲ್ಲಿ ಅನುಮತಿ ಪಡೆದು ಇನ್ನೊಂದು ಕಡೆ ನಡೆಸಲಾಗುತ್ತಿದೆ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಪಡೆದು ಆಂಗ್ಲ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅನುಮತಿ ಪಡೆಯದೆ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳಿರುವುದಿಲ್ಲ. ಮಕ್ಕಳಿಂದ ಹೆಚ್ಚಿನ ಶುಲ್ಕ ಪಡೆದು ಅನರ್ಹ ಬೋಧಕರಿಂದ ಬೋಧಿಸಲಾಗುತ್ತಿದ್ದು, ಪಠ್ಯಪುಸ್ತಕ, ಬ್ಯಾಗ್ ಹೆಸರಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಅನಧೀಕೃತ ಶಿಕ್ಷಣ ಕೇಂದ್ರಗಳನ್ನು ಬಂದ್ ಮಾಡಿಸಬೇಕೆಂದು ಒತ್ತಾಯಿಸಿದರು.