

ರಾಜ್ಯ ರೈತ ಸಂಘದ ಮುಖಂಡರ ಒತ್ತಾಯ | ಎಸಿ ರಾಜಶೇಖರ ಡಂಬಳರಿಗೆ ಮನವಿ
ಲಿಂಗಸುಗೂರು: ಪ್ರಧಾನ ಮಂತ್ರಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜಿನಲ್ಲಿ ಪ್ರತಿ ರೈತರಿಗೆ 25 ಸಾವಿರ ರೂ. ಪರಿಹಾರ ಕಲ್ಪಿಸುವ ಜತೆಗೆ ಪಶು ಸಾಕಣೆೆದಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಸಹಾಯಕ ಆಯುಕ್ತ ರಾಜಶೇಖರ ಡಂಬಳರಿಗೆ ಮನವಿ ಸಲ್ಲಿಸಿದರು. ತೋಟಗಾರಿಕೆ ಅಧಿಕಾರಿಗಳು ಸರ್ವೇ ಮಾಡಿ ಬೆಳೆನಷ್ಟ ಹೊಂದಿದ ಹಾಗೂ ಯೋಗ್ಯ ಧಾರಣಿ ಸಿಗದ ರೈತರಿಗೆ ಪರಿಹಾರ ಕಲ್ಪಿಸಬೇಕು. ರಾಂಪೂರ ಏತನೀರಾವರಿ ಯೋಜನೆ ಕಾಲುವೆಗೆ ಭೂಮಿ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಜಾರಿಗೆ ತಂದ ಸಾಲಮನ್ನಾ ಯೋಜನೆಯಿಂದ ವಂಚಿತಗೊಂಡ ರೈತರಿಗೆ ಸಾಲಮನ್ನಾ ಮಾಡಬೇಕು. ಜಮೀನಿನಲ್ಲಿ ವಾಸಿಸುವ ರೈತರ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ದರ ಕುಸಿತವಾದಾಗ ಸರ್ಕಾರ ರೈತರ ಕೃಷಿ ಉತ್ಪನ್ನ ನೇರವಾಗಿ ಖರೀದಿಸಬೇಕು. ಕೃಷಿಹೊಂಡ ನಿರ್ಮಿಸಿದ 190 ರೈತರಿಗೆ ಬಿಲ್ ಪಾವತಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಮತ್ತು ಅರಣ್ಯ ಇಲಾಖೆ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ಪಟ್ಟಾ ಕೊಡಬೇಕೆಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಅಮರಣ್ಣ ಗುಡಿಹಾಳ, ಕುಪ್ಪಣ್ಣ ಗೋನವಾಟ್ಲ, ಮಲ್ಲಣ್ಣ ಗೌಡೂರು, ವೀರನಗೌಡ ಹಟ್ಟಿ, ಚಂದಾವಲಿ, ಹನುಮಂತ ಪೂಜಾರಿ, ಹೊಳೆಯಪ್ಪ, ಬಸನಗೌಡ, ಹುಸೇನ ನಾಯಕ, ಕಾಸಿಂಸಾಬ್, ಹುಚ್ಚರೆಡ್ಡಿ, ಸಂಗಣ್ಣ ಇತರರು ಇದ್ದರು.