

ಲಿಂಗಸಗೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಒತ್ತಾಯಿಸಿ ಕರವೇ ತಾಲೂಕು ಘಟಕ ಪಟ್ಟಣದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಗೆ ಶುಕ್ರವಾರ ಮನವಿ ಸಲ್ಲಿಸಿತು.
ರಾಜ್ಯದ ಪ್ರತಿ ತಾಲೂಕಿನ ಹೋಬಳಿ ಗ್ರಾಮಗಳಲ್ಲಿ ಅನ್ಯಭಾಷಿಕರು ಬೇರೆ ಭಾಷೆಯ ನಾಮಫಲಕ ಅಳವಡಿಸಿದ್ದಾರೆ. ಕನ್ನಡ ನಾಮಫಲಕ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆಯಲ್ಲಿ ಹೋರಾಟಗಾರರನ್ನು ಬಂಧಿಸಲಾಗಿದೆ. ಕಾವೇರಿ ನೀರು ವಿಚಾರದಲ್ಲಿ, ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ಅನ್ಯಾಯವಾದರೂ ಮೌನವಾಗಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದು ಬಿಡುಗಡೆಗೆ ಮಾಡಬೇಕು. ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಶಾಂತಿಯುತ ಹೋರಾಟ ಉಗ್ರರೂಪ ಪಡೆಯಲಿದೆ ಎಂದು ಎಚ್ಚರಿಸಿದರು.