

ಲಿಂಗಸುಗೂರು: ಗದಗ-ವಾಡಿ ರೈಲು ಯೋಜನೆಗೆ ಭೂಮಿ ನೀಡಿದ ರೈತರಿಗೆ ನ್ಯಾಯಯುತ ಪರಿಹಾರ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಕೆ. ರಂಗನಾಥ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 2013-14ರಲ್ಲಿ ಕೇಂದ್ರ ಸರ್ಕಾರ ಗದಗ-ವಾಡಿ ರೈಲು ಯೋಜನೆಗೆ ಒಪ್ಪಿಗೆ ನೀಡಿದ್ದು, ಇದರ ಮಾರ್ಗ ತಾಲೂಕಿನಲ್ಲಿ ಒಟ್ಟು 69 ಕಿ.ಮೀ. ಹಾದು ಹೋಗಲಿದೆ. ಇದಕ್ಕಾಗಿ 23 ಹಳ್ಳಿಗಳ 1085 ಎಕರೆ ಕೃಷಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಈಗಾಗಲೇ ಆರ್ಯ ಭೋಗಾಪುರ, ಮಾಕಾಪುರ, ತಲೆಕಟ್ಟು, ಮರಳಿ, ಬನ್ನಿಗೋಳ, ಜಾಂತಾಪುರ, ಮುದಗಲ್, ಕಡದರಹಾಳ, ತೆರಿಬಾವಿ, ಬುದ್ದಿನ್ನಿ, ಕಳ್ಳಿಲಿಂಗಸುಗೂರು, ಕಸಬಾಲಿಂಗಸುಗೂರು, ಹುಲಿಗುಡ್ಡ, ಕರಡಕಲ್, ಹೊನ್ನಳ್ಳಿ, ಯರಡೋಣ, ದೇವರಭೂಪುರ, ಗುಂತಗೋಳ, ಗುರುಗುಂಟಾ ಗ್ರಾಮಗಳ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಸರ್ಕಾರ ಸದರಿ ಯೋಜನೆಗೆ ಜಮೀನು ನೀಡಿದ ರೈತರಿಗೆ ಪ್ರತಿ ಎಕರೆಗೆ ಕೇವಲ 8 ರಿಂದ 13 ಲಕ್ಷ ರೂ. ನಿಗದಿಪಡಿಸಿದ್ದು, ಇದು ಅವೈಜ್ಞಾನಿಕವಾಗಿದೆ. ಭೂಮಿ ಕಳೆದುಕೊಂಡ ರೈತರು ಬೇರೆಡೆ ಜಮೀನು ಖರೀದಿಸಲು ಮುಂದಾದರೆ ಪ್ರತಿ ಎಕರೆಗೆ ಕನಿಷ್ಠ 25 ಲಕ್ಷ ರೂ. ಬೇಡಿಕೆ ಇದೆ. ಸರ್ಕಾರದ ಪರಿಹಾರದಿಂದ ಕೃಷಿಕರಿಗೆ ಅನ್ಯಾಯವಾಗುತ್ತದೆ. ಪ್ರಸ್ತುತ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದು, ಪ್ರತಿ ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಯೋಜನೆಯಡಿ ಸಂಪೂರ್ಣ ಭೂಮಿ ಕಳೆದುಕೊಂಡ ರೈತ ಕುಟುಂಬದ ಓರ್ವ ಸದಸ್ಯರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಸದರಿ ಕಾಯ್ದೆಗಳಲ್ಲಿ ಅಡಕವಾದ ಕನಿಷ್ಠ ಬೆಂಬಲ ಬೆಲೆ ಯೋಜನೆ ಕೂಡ ರದ್ದಾಗಿದೆ. ಇದನ್ನು ಮತ್ತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.