

ಮಳವಳ್ಳಿ: ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ಲಿಂಗರಾಜು ಅಧ್ಯಕ್ಷ, ಎಸ್.ಮಾಲಾಶ್ರೀ ಉಪಾಧ್ಯಕ್ಷೆಯಾಗಿ ಚುನಾಯಿತರಾದರು.
ಇಲ್ಲಿನ ಸಂಘದ ಒಂದು ಸರ್ಕಾರಿ ನಾಮಿನಿ ಸೇರಿದಂತೆ 15ನಿರ್ದೇಶಕರ ಸ್ಥಾನಗಳಿಗೆ ಒಂದು ಮಹಿಳಾ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಉಳಿದ 13 ಸ್ಥಾನಗಳಿಗೆ ಸೆ.28 ರಂದು ಚುನಾವಣೆ ನಡೆಸಿದ್ದು, ಅಂದಿನ ಚುನಾವಣೆಯಲ್ಲಿ 8 ಕಾಂಗ್ರೆಸ್ ಬೆಂಬಲಿತ ಹಾಗೂ 5 ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗಾಗಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಂ.ಲಿಂಗರಾಜು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಶಿವರುದ್ರಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಎಸ್.ಮಾಲಾಶ್ರೀ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಜೆ. ಶ್ರೀಧರ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆ ಮೈತ್ರಿ ಅಭ್ಯರ್ಥಿಗಳ ತಮ್ಮ ಬೆಂಬಲಿತ ನಿರ್ದೇಶಕರ ತಲಾ 5 ಮತಗಳನ್ನು ಪಡೆದು ಪರಾಜಿತರಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರಿ ನಾಮಿನಿ ಸೇರಿ 9 ಮತ ಪಡೆದು ವಿಜೇತರಾದರಾದರೂ ತಮ್ಮದೇ ಬೆಂಬಲಿತ ನಿರ್ದೇಶಕರೊಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಳಿಗೆ ಖಾಲಿ ಬ್ಯಾಲೆಟ್ ( ಖೋತಾ) ಮತ ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿ ತೆರಳಿದ ಪ್ರಸಂಗ ಎಲ್ಲರ ಗಮನ ಸೆಳೆಯಿತು.
ತಹಸೀಲ್ದಾರ್ ವಿ.ಎಸ್.ಲೋಕೇಶ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಟಿ.ಎ.ಪಿ.ಸಿ.ಎಂ.ಎಸ್ ನೂತನ ಅಧ್ಯಕ್ಷ ಎಂ.ಲಿಂಗರಾಜು ಮಾತನಾಡಿ, ನನ್ನ ಗೆಲುವಿಗೆ ಕಾರಣರಾದ ಎಲ್ಲ ಸದಸ್ಯರು, ರೈತರು ಹಾಗೂ ಬೆಂಬಲಿಗರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುವುದರ ಜತೆಗೆ ಈ ಜಯವು ನನ್ನ ವೈಯಕ್ತಿಕ ವಿಜೃಂಭಣೆಗೆಲ್ಲದೆ ನಮ್ಮ ಸಂಘದ ಸಮೂಹದ ಶಕ್ತಿಯ ಪ್ರತೀಕವಾಗಿದೆ. ನಮ್ಮ ಸಂಘದ ಅಭಿವೃದ್ಧಿ, ರೈತರ ಹಿತಕ್ಕಾಗಿ ಸದಾ ಶ್ರಮಿಸುತ್ತೇನೆ. ಎಲ್ಲರ ಜ್ಞಾನ, ಅನುಭವ ಮತ್ತು ಸಲಹೆಗಳನ್ನು ಪ್ರಾಮುಖ್ಯವಾಗಿ ಪರಿಗಣಿಸುವ ಮೂಲಕ ಉತ್ತಮ ಆಳಿತ ನೀಲಾಗುವುದು. ನಮ್ಮ ಕಾಲಾವಧಿಯಲ್ಲಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಸಮಾನತೆಗೆ ವೇದಿಕೆ ನಿರ್ಮಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಇತರೆ ನಿರ್ದೇಶಕರು, ಕಾಂಗ್ರೆಸ್ ಮುಖಂರಾದ ಸಿ.ಪಿ.ರಾಜು. ದೊಡ್ಡಯ್ಯ, ಚಿಕ್ಕಲಿಂಗಯ್ಯ, ಆರ್. ಎನ್.ವಿಶ್ವಾಸ್, ಕೃಷ್ಣ, ದ್ಯಾಪೇಗೌಡ, ಶಿವಮಾದೇಗೌಡ, ರಾಜೇಶ್ ಇದ್ದರು.