ಲಿಂಗರಾಜರ ಆದರ್ಶ ಎಂದಿಗೂ ಅಮರ

10 Jaggu 8-web
ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶಿರಸಂಗಿ ಲಿಂಗರಾಜರ ಜಯಂತ್ಯುತ್ಸವನ್ನು ಡಾ.ಗುರುಪಾದ ಮರಿಗುದ್ದಿ, ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಬಸವರಾಜ ತಟವಟಿ, ಡಾ.ಎಫ್.ವಿ. ಮಾನ್ವಿ, ಸುಧಾ ಉಪ್ಪಿನ, ರಾಡಿಡಿಜಶ್ರೀ ಸಂಬರಗಿಮಠ, ಡಾ.ಎಚ್.ಎಂ. ಚೆನ್ನಪ್ಪಗೋಳ ಇದ್ದರು.
Published on

ಬೆಳಗಾವಿ: ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಇಡೀ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು ಭಾರತದ ಚರಿತ್ರೆಯಲ್ಲೇ ಅಪರೂಪವೆನಿಸಿದೆ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಎಂದಿಗೂ ಅಮರ ಎಂದು ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.

ನಗರದ ಲಿಂಗರಾಜ ಕಾಲೇಜಿನಲ್ಲಿ ಬೆಳಗಾವಿಯ ಎಲ್ಲ ಕೆಎಲ್‌ಇ ಅಂಗಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಜರುಗಿದ ಶಿರಸಂಗಿ ಲಿಂಗರಾಜರ 163ನೇ ಜಯಂತಿ ಉತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು. ಲಿಂಗರಾಜರು ಸಮಾಜದ ಉದಾತ್ತ ಉದ್ದೇಶಕ್ಕಾಗಿ ಮಹಾದಾನ ನೀಡಿ ಔದಾರ್ಯ ಮೆರೆದಿದ್ದಾರೆ. ಅವರ ಬದುಕು ಸುಖದ ಸುಪತ್ತಿಗೆಯಾಗಿರಲಿಲ್ಲ. ಕೌಟುಂಬಿಕ ಬವಣೆಗಳಿಂದ ನೊಂದುಕೊಂಡರು. ನೂರೆಂಟು ಕಷ್ಟ ಎದುರಿಸಿದರು. ಕೃಷಿ, ನೀರಾವರಿ ಸೇರಿ ಹಲವು ಮೌಲಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅಂತಹ ಮಹಾತ್ಮರು ಇಂದಿನ ಯುವ ಪೀಳಿಗೆಗೆ ಅನುಕರಣೀಯರು ಎಂದರು. ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಲಿಂಗರಾಜರಂತಹ ಪುಣ್ಯಾತ್ಮರನ್ನು ಸ್ಮರಿಸುವುದು ನಿಜಮುಕ್ತಿ ಇದ್ದಂತೆ. ಸಮಸ್ತ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯ ಅನುಪಮ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ ಮಾತನಾಡಿ, ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಶಿರಸಂಗಿ ಲಿಂಗರಾಜರು. ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದುಹಾಕಬೇಕೆಂಬ ಸಂಕಲ್ಪದೊಂದಿಗೆ ಶಿಕ್ಷಣ ರಂಗಕ್ಕೆ ಆರ್ಥಿಕ ಮತ್ತು ಜ್ಞಾನದ ಶಕ್ತಿಯನ್ನು ತುಂಬಿದರು. ಇಂತಹ ತ್ಯಾಗವೀರ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವಕ್ಕೆ ಮಾರುಹೋದ ನಮ್ಮ ಕೆಎಲ್‌ಇ ಸಂಸ್ಥೆಯ ಏಳು ಜನ ಶಿಕ್ಷಕರು ಅವರ ಆದರ್ಶವನ್ನೇ ಇಟ್ಟುಕೊಂಡು 1916ರಲ್ಲಿ ಕೆಎಲ್‌ಇ ಸಂಸ್ಥೆ ಹುಟ್ಟುಹಾಕಿದರು. 1933ರಲ್ಲಿ ಪ್ರಥಮ ಪದವಿ ಕಾಲೇಜಿಗೆ ಲಿಂಗರಾಜರ ಮೇಲಿನ ಅಭಿಮಾನದಿಂದಾಗಿ ಲಿಂಗರಾಜ ಮಹಾವಿದ್ಯಾಲಯ ಎಂದು ನಾಮಕರಣ ಮಾಡಿದರು ಎಂದರು.

ಡಾ.ಎಫ್.ವಿ. ಮಾನ್ವಿ, ಸುಧಾ ಉಪ್ಪಿನ, ರಾಜಶ್ರೀ ಸಂಬರಗಿಮಠ ಇದ್ದರು. ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಮಹೇಶ ಗುರನಗೌಡರ, ಪ್ರೊ. ಸಿದ್ದನಗೌಡ ಪಾಟೀಲ ನಿರೂಪಿಸಿದರು. ಮಾಹೇಶ್ವರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಎಚ್.ಎಂ. ಚೆನ್ನಪ್ಪಗೋಳ ವಂದಿಸಿದರು. ಜಯಂತ್ಯುತ್ಸವ ಅಂಗವಾಗಿ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರುಗಿತು. 60 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net