

ಮಹಾಲಿಂಗಪುರ: ಅಥಣಿ ಮುರಘೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಯೋಗ್ಯ ಗುರುವಿನ ಪ್ರೇರಣೆಯಿಂದಾಗಿ ಲಿಂಗರಾಜರು ತ್ಯಾಗವೀರ ಸಿರಸಂಗಿ ಲಿಂಗರಾಜ ಎನಿಸಿಕೊಂಡರು. ಕೆಎಲ್‌ಇ ಸಂಸ್ಥೆ ಜಾಗತಿಕ ಮನ್ನಣೆ ಪಡೆಯಲು ಲಿಂಗರಾಜರು ಸಹ ಕಾರಣಪುರುಷರಾಗಿದ್ದಾರೆ ಎಂದು ಸಾಹಿತಿ ಡಾ. ಅರ್ಚನಾ ಅಥಣಿ ಅಭಿಪ್ರಾಯಪಟ್ಟರು.
ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಚನ್ನಗಿರಿಶ್ವರ ಪ್ರಾಸಾಧಿಕ ಕಲಾ, ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಅಂಗ ಸಂಸ್ಥೆಗಳ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಲಿಂಗರಾಜರು ಬರಗಾಲದಲ್ಲಿ ಕೆರೆ ಕಟ್ಟಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಗಳಿಗೆ ದಾನ ನೀಡಿ ಸರ್ವ ಧರ್ಮ ಸಮಾನತೆ ಕಾಪಾಡಿದ್ದಾರೆ. ಅವರು ಧನಾತ್ಮಕ ಆಲೋಚನೆಯಿಂದ ಹೃದಯ ಶ್ರೀಮಂತಿಕೆ ಹೊಂದಿದವರು. ತಮಗಾಗಿ ಏನೂ ಮಾಡಿಕೊಳ್ಳದೆ ಎಲ್ಲವನ್ನು ಸಮಾಜಕ್ಕೆ ತ್ಯಾಗ ಮಾಡಿ ತ್ಯಾಗರಾಜರಾದರು. ಶರಣರು ಲಿಂಗರಾಜ ಅವರನ್ನು 64ನೇ ಪುರಾತನರು ಎಂದು ಹೆಸರಿಸಿದ್ದಾರೆ ಎಂದರು.
ಕೆಎಲ್‌ಇ ಆಜೀವ ಸದಸ್ಯ ಪ್ರಾಚಾರ್ಯ ಎಸ್. ಐ. ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗರಾಜರು ಸಂತಾನವಿಲ್ಲದ ತಮ್ಮ ಜೀವನದ ಅಂತಿಮ ದಿನಗಳಲ್ಲಿ ತಮ್ಮ ಸಮಸ್ತ ಆಸ್ತಿಯನ್ನೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಧಾರೆಯೆರೆದ ಪರಿಣಾಮ 20ನೇ ಶತಮಾನದ ಆದಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಹುಟ್ಟಿಕೊಂಡು ಉತ್ತರಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಲು ಸಾಧ್ಯವಾಯಿತು. ನಮ್ಮ ಆದಾಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದಾನ ಮಾಡಿದರೆ ಈ ಕಾರ್ಯಕ್ರಮ ಸಾರ್ಥಕವಾದಂತೆ ಎಂದು ತಿಳಿಸಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ. ಎಂ. ಅವರಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಪೂ ಕಾಲೇಜು ಪ್ರಾಚಾರ್ಯ ಎಲ್.ಬಿ. ತುಪ್ಪದ ಸ್ವಾಗತಿಸಿದರು. ಉಪನ್ಯಾಸಕ ಬಿ. ಎನ್. ಹಂದಿಗುಂದ ನಿರೂಪಿಸಿದರು. ಪ್ರೌಢ ಶಾಲಾ ಉಪ ಪ್ರಾಚಾರ್ಯ ಬಿ.ಎನ್. ಅರಕೇರಿ ವಂದಿಸಿದರು.
ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಂತೋಷ ಹುದ್ದಾರ, ಐ.ಟಿ.ಐ ಪ್ರಾಚಾರ್ಯ ಎಸ್.ಎಸ್. ಅಂಗಡಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜೆ.ಎಸ್. ಹಿರೇಮಠ ಇತರರಿದ್ದರು.