

ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ, ಕನ್ನಡತನ ಉಳಿಯುದಕ್ಕೆ ಕೆಎಲ್ ಇ ಸಂಸ್ಥೆಯ ಲಿಂಗರಾಜ ಕಾಲೇಜು ಕಾರಣವಾಗಿದೆ. ಲಿಂಗರಾಜ ಕಾಲೇಜಿನಲ್ಲಿರುವ ಒಂದೊಂದು ಕಲ್ಲುಗಳೂ ಕನ್ನಡಪರ ಮಾತನಾಡುತ್ತವೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಲಿಂಗರಾಜ ಕಾಲೇಜಿನ ಆವರಣದಲ್ಲಿ ಕಾಲೇಜಿನ ಕನ್ನಡ ಬಳಗದಿಂದ ಶನಿವಾರ ಆಯೋಜಿಸಿರುವ ಕನ್ನಡ ಹಬ್ಬ'ಜನಪದ ಸಂಭ್ರಮ ಎಂಬ 'ರಾಜ್ಯಮಟ್ಟದ ಸ್ಪರ್ಧೆಗಳ' ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಲಿಂಗರಾಜ ಕಾಲೇಜು ಮತ್ತು ಇಲ್ಲಿನ ಬೋಧಕ ವರ್ಗವು ಕನ್ನಡ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾಲೇಜಿನ ಪ್ರಾಚಾರ್ಯರು ಮರಾಠಿ ವಿದ್ಯಾರ್ಥಿಗಳ ಕಾಟ, ಕೀಟಲೆಗಳನ್ನು ಸಹಿಸಿಕೊಂಡು ಕನ್ನಡ ಬೇರೂರಲು ಕಾರಣರಾಗಿದ್ದಾರೆ. ಕನ್ನಡಪರ ಹೋರಾಟದ ಕಿಚ್ಚು ಈ ಕಾಲೇಜಿನಿಂದ ಆರಂಭವಾಗಿದೆ ಎಂದರು.
ಜಾನಪದದಿಂದ ಕನ್ನಡ ಹುಟ್ಟಿ ಕೊಂಡಿದೆ. ಬೀಸುವುದು, ಕುಟ್ಟುವುದು, ಸೀಮಂತ ಕಾರ್ಯಕ್ರಮ, ಮದುವೆ ಸಂಭ್ರಮದಲ್ಲಿ ಸುಂದರವಾಗಿ ಹಾಡು ಹಾಡುತ್ತಿದ್ದರು. ಹೀಗೆ ಕನ್ನಡ ಬೆಳವಣಿಗೆಗೆ ಪೂರ್ವಜರು ಕಾರಣರಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಜಾನಪದ ನಶಿಸಿ ಹೋಗುತ್ತಿದೆ. ದೇಶಿಯ ಉಡುಗೆ, ತೊಡುಗೆ, ಭಾಷೆ ನಶಿಸುತ್ತಿದೆ. ನಮ್ಮ ಜಾನಪದ, ದೇಶಿಯತೆ ಉಳಿಯಬೇಕು ಎಂದರು.
ಕೆಎಲ್ಇ ನಿರ್ದೇಶಕ, ಮಾಜಿ ಎಂಎಲ್ ಸಿ ಮಹಾಂತೇಶ ಕವಟಗಿಮಠ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಮೈಸೂರು ಬಳಿಕ ಕರ್ನಾಟಕ ರಾಜ್ಯ ರಚನೆಯಾಗಿ, ಕನ್ನಡ ನಾಡು ಉದಯವಾಯಿತು. ಇವತ್ತು ಬೆಳಗಾವಿಯಲ್ಲಿದ್ದ ಕನ್ನಡದ ಮನಸ್ಸುಗಳು ಕರ್ನಾಟಕದಲ್ಲಿ ಇಲ್ಲ. ಭಾಷೆ, ನೆಲ-ಜಲ ವಿಷಯಲ್ಲಿ ಲಿಂಗರಾಜ ಕಾಲೇಜಿನ ಕೊಡುಗೆ ಅಪಾರ ಎಂದರು.
ಸಮಾಜದಲ್ಲಿ ಎಷ್ಟೇ ದೊಡ್ಡವರಾದರೂ ಮಾತೃ ಭಾಷೆ ಮರೆಯಬಾರದು. ಜನ್ಮ ಕೊಟ್ಟ ತಂದೆ- ತಾಯಿ, ನಮ್ಮ ನೆಲ, ಸಂಸ್ಕೃತಿ ಬಿಟ್ಟು ಕೊಡಬಾರದು ಎಂದು ಸಲಹೆ ನೀಡಿದರು.
ರಾಣಿ ಚನ್ನಮ್ಮ ವಿವಿಯ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಪ್ರೊ. ಎಸ್.ಎನ್.ಗಂಗಾಧರಯ್ಯ ಮಾತನಾಡಿ, ಜನಪದದ ಗೀತೆಗಳು ಕನ್ನಡಿಗರು ಕೊಟ್ಟಿರುವ ಬಳವಳಿಗಳು. ಲಿಂಗರಾಜ ಕಾಲೇಜು ಕನ್ನಡದ ಪ್ರಜ್ಞೆಯಾಗಿದೆ. ವಿದ್ಯಾರ್ಥಿಗಳು ಕನ್ನಡ ಪದಗಳನ್ನು ಬಳಸಿ ಜಾನಪದ ಬೆಳೆಸಬೇಕು ಎಂದರು.
ಲಿಂಗರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಎಂ. ಚನ್ನಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿ ವೇದಿಕೆಯಲ್ಲಿದ್ದರು. ಡಾ. ಮಹೇಶ ಗುರನಗೌಡರ, ಪ್ರೊ. ಸಿದ್ದನಗೌಡ ಪಾಟೀಲ ನಿರೂಪಿಸಿದರು. ಜಾನಪದ ಸಂಭ್ರಮ. ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಭಾಗದ 27 ಕಾಲೇಜಿನ 53 ತಂಡಗಳು ಭಾಗವಹಿಸಿವೆ.