ಲೈನ್‌ಮನ್ ಸಾವು ಪ್ರಕರಣ - ಸಂಪೂರ್ಣ ತನಿಖೆ ನಡೆಸಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹ

jkd 20-2
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ಕಾಶಿನಾಥ ಚನವೀರ, ಜೀವಪ್ಪ ಮಾಳಿ, ಸುನೀಲ ಟಕ್ಕೋಡ ಇದ್ದರು.
Published on

ಜಮಖಂಡಿ: ತಾಲೂಕಿನ ಜಂಬಗಿ ಬಿ.ಕೆ., ಸಾವಳಗಿ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಲೈನ್ ದುರಸ್ತಿ ಸಂದರ್ಭದಲ್ಲಿ ಲೈನ್‌ಮನ್ ಪರಸಪ್ಪ ಟಕ್ಕೋಡ ನಿಧನರಾಗಿರುವುದು ಆಕಸ್ಮಿಕವಲ್ಲ, ಅದು ಪೂರ್ವ ನಿಯೋಜಿತ ಕೊಲೆಯಾಗಿದ್ದು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದರು.

ಲೈನ್‌ಮನ್ ಪರಸಪ್ಪ ಅವರ ಸಾವಿಗೆ ಕಾರಣರಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಲೈನ್‌ಮನ್ ಪರಸಪ್ಪ ಟಕ್ಕೋಡ ಗ್ರಾಮದ ಲೈನ್‌ಮನ್ ಆಗಿದ್ದು ಅವರನ್ನು ಜಂಬಗಿ ರಸ್ತೆಯಲ್ಲಿ ದುರಸ್ತಿ ಕಾರ್ಯಕ್ಕೆ ತೊಡಗಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ನಗರದ ಕಾನಿಪ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸುನೀಲ ಟಕ್ಕೋಡ ಮಾತನಾಡಿ, ಕಳೆದ ಮೂರು ವರ್ಷದಿಂದ ಈ ಭಾಗದ ಸೆಕ್ಷನ್ ಆಫೀಸರ್ ಜಿತಾಲಾಲ ರಾಠೋಡ ಮೃತ ಲೈನ್‌ಮನ್ ಪರಸಪ್ಪ ಅವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಸಾಕಷ್ಟು ಬಾರಿ ನನ್ನ ಮುಂದೆ ಹೇಳಿದ್ದರು. ಘಟನೆ ನಡೆದ 5 ನಿಮಿಷದಲ್ಲಿ ಸಿಬ್ಬಂದಿ ಮೃತದೇಹ ಸ್ಥಳಾಂತರಿಸಲು ಮುಂದಾದಾಗ ಅಲ್ಲಿನ ಸಾರ್ವಜನಿಕರು ತಡೆಯೊಡ್ಡಿದ್ದಾರೆ. ಆಗ ಮೃತದೇಹವನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ನೋಡಿದರೆ ಪೂರ್ವ ನಿಯೋಜಿತ ಕೊಲೆ ಮಾಡಲಾಗಿದೆ ಎನಿಸುತ್ತದೆ ಎಂದು ಆರೋಪಿಸಿದರು.

ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸೆ.22 ರಂದು ಟಕ್ಕೋಡ ಕ್ರಾಸ್ ಹತ್ತಿರ ಸಾವಳಗಿ- ಜಮಖಂಡಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕಾಶಿನಾಥ ಚನವೀರ, ಜೀವಪ್ಪ ಮಾಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net