ಪ್ರಚಾರಕ್ಕೆ ಸೀಮಿತ ‘ಬೆಂಬಲ’ ಬೆಲೆ

LXR Senga
Published on

ಲಕ್ಷೇಶ್ವರ: ಬೆಂಬಲ ಬೆಲೆಯಡಿ ರೈತರ ಉತ್ಪನ್ನ ಖರೀದಿ ಬಗ್ಗೆ ಸರ್ಕಾರಗಳು 6 ತಿಂಗಳ ಮೊದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ. ಆದರೆ, ರೈತರೆಲ್ಲ ಉತ್ಪನ್ನ ಮಾರಾಟ ಮಾಡಿದ ಮೇಲೆ ಆದೇಶ, ಖರೀದಿ ಪ್ರಕ್ರಿಯೆ ಶುರುವಾಗುತ್ತವೆ. ಹೀಗಾಗಿ ಬೆಂಬಲ ಬೆಲೆ ಯೋಜನೆ ಪ್ರಚಾರಕ್ಕೆ ಮಾತ್ರ ಸೀಮಿತವಾದಂತಾಗುತ್ತದೆ.

ಇದಕ್ಕೆ ಉದಾಹರಣೆ ಎಂಬಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅನುಸಾರ ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ 6783 ರೂ.ದಂತೆ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯ ಜಿಲ್ಲೆಯ 8 ಸೊಸೈಟಿಗಳಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಠ 15 ಕ್ವಿಂ. ಖರೀದಿ ಪ್ರಕ್ರಿಯೆಗೆ ಆದೇಶಿಸಲಾಗಿತ್ತು. ಅದರನ್ವಯ 2024ರ ಅ. 24ರಿಂದ ಡಿ. 9ರವರೆಗೆ ನೋಂದಣಿ ಮತ್ತು ಅ. 24ರಿಂದ ಜ. 22ರವರೆಗೆ (90 ದಿನ) ಖರೀದಿ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಜಿಲ್ಲೆಯ ಹೊಂಬಳ, ಮುಳಗುಂದ, ಬಳಗಾನೂರ, ಕಲಕೇರಿ, ಅಬ್ಬಿಗೇರಿ, ರಣತೂರ, ಶಿಗ್ಲಿ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ನೋಂದಣಿ ಪ್ರಕ್ರಿಯೆಗೆ ತಾಂತ್ರಿಕ ದೋಷ ಅಡ್ಡಿಯಾಯಿತು. ಫಲವಾಗಿ ಸರ್ಕಾರ ನೋಂದಣಿಗೆ ಪುನಃ ಜ.20ರವರೆಗೆ ಅವಕಾಶ ಕಲ್ಪಿಸಿತು. ಇಷ್ಟಾಗಿಯೂ ತಾಂತ್ರಿಕ ದೋಷ ಸರಿಯಾಗದ್ದರಿಂದ ಅಬ್ಬಿಗೇರಿಯಲ್ಲಿ ಕನಿಷ್ಠ 15, ಮುಳಗುಂದದಲ್ಲಿ 497 ಗರಿಷ್ಠ ಸೇರಿ ಜಿಲ್ಲಾದ್ಯಂತ ನೋಂದಣಿ ಆಗಿದ್ದು 1462 ರೈತರು ಮಾತ್ರ. 90 ದಿನ ಕಾಲಾವಕಾಶ ಕಲ್ಪಿಸಿದ್ದರೂ ಖರೀದಿ ಪ್ರಕ್ರಿಯೆಗೆ ಅವಕಾಶ ಸಿಕ್ಕಿದ್ದು ಜ. 22ರ ಕೊನೆಯ 1 ದಿನ ಮಾತ್ರ!

ಸಿಕ್ಕ ಒಂದೇ ದಿನದ ಅವಕಾಶದಲ್ಲಿ 239 ರೈತರು 2161 ಕ್ವಿಂ. ಶೇಂಗಾ ಮಾರಾಟ ಮಾಡಿದ್ದಾರೆ.

ನೋಂದಣಿ ಮಾಡಿದ 1224 ರೈತರು ಬೆಂಬಲ ಬೆಲೆ ಯೋಜನೆಯಿಂದ ವಂಚಿತರಾಗಿದ್ದಾರೆ. ಅಲ್ಲದೆ, ಸರ್ಕಾರ ಖರೀದಿ ಅವಧಿ ವಿಸ್ತರಿಸಬಹುದು ಎಂಬ ಆಸೆಗಣ್ಣಿನಿಂದ ಶೇಂಗಾ ಚೀಲದೊಂದಿಗೆ ಕಳೆದ 15-20 ದಿನಗಳಿಂದ ಹಗಲೂ-ರಾತ್ರಿ ಕಾಯುತ್ತಿದ್ದಾರೆ. ಇದು ರೈತರ ಜತೆಗೆ ಖರೀದಿ ಕೆಂದ್ರದವರಿಗೂ ಸಂಕಷ್ಟ ತಂದೊಡ್ಡಿದೆ. ಇದರಿಂದ ಅಸಹಾಯಕರಾದ ಕೇಂದ್ರದವರು, ಶೇಂಗಾ ಚೀಲ ಮರಳಿ ತೆಗೆದುಕೊಂಡು ಹೋಗುವಂತೆ ರೈತರಿಗೆ ಒತ್ತಾಯಿಸುತ್ತಿದ್ದಾರೆ. ಬೇಸತ್ತ ಕೆಲ ರೈತರು ಎಪಿಎಂಸಿ ಇಲ್ಲವೆ ಮಧ್ಯವರ್ತಿಗಳಿಗೆ ಪ್ರತಿ ಕ್ವಿಂಟಾಲ್‌ಗೆ 3500 ರಿಂದ 4000ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಲಕ್ಷೇಶ್ವರ ತಾಲೂಕಲ್ಲಿ 5 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಶೇಂಗಾ ಬೆಳೆಯಲಾಗಿದೆ. ಖರೀದಿ ಕೇಂದ್ರದ ಲಾಭ ಸಿಕ್ಕಿದ್ದು 239 ರೈತರಿಗೆ ಮಾತ್ರ. ಮುಂಗಾರಿನ ಹೆಸರು ಖರೀದಿಯೂ ಹೀಗೆಯೇ ಆಗಿತ್ತು. ಈಗ ಕಡಲೆ ಬೆಂಬಲ ಬೆಲೆ ಖರೀದಿಗೆ ಆದೇಶವಾಗಿ 15 ದಿನ ಕಳೆದರೂ ಯಾವುದೇ ಪ್ರಕ್ರಿಯೇ ಆಗಿಲ್ಲ. ರೈತರ ಹೋರಾಟ, ಪ್ರತಿಭಟನೆ, ಮನವಿಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ಸರ್ಕಾರ ಶೇಂಗಾ ಖರೀದಿ ಮತ್ತು ನೋಂದಣಿಗೆ ಕಾಲಾವಕಾಶ ಕಲ್ಪಿಸಬೇಕು. ಚನ್ನಪ್ಪ ಷಣ್ಮುಕಿ, ಕೃಷಿಕ ಸಮಾಜ-ರೈತ ಸಂಘಟನೆ ತಾಲೂಕಾಧ್ಯಕ್ಷ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಮುಗಿದಿದೆ. ತಾಂತ್ರಿಕ ತೊಂದರೆಯಿಂದ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿದ 1224 ರೈತರಿಂದ ಖರೀದಿಯಾಗಿಲ್ಲ. ನೆರೆಯ ಹಾವೇರಿ, ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲೂ ಈ ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಚರ್ಚಿಸಿ ಕಾಲಾವಕಾಶಕ್ಕೆ ನಾಫೆಡ್‌ನ ರಾಜ್ಯ ಮತ್ತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೃಷ್ಣರೆಡ್ಡಿ ಮೇಟಿ, ಕೆಒಎಫ್ ಜಿಲ್ಲಾ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net