ಶಿಕ್ಷಕರನ್ನು ಬೋಧನೆಗೆ ಮಾತ್ರ ಸೀಮಿತಗೊಳಿಸಿ

horatti
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮಧ್ಯಾಹ್ನ ಬಿಸಿಯೂಟ ಹಾಗೂ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಅನುಷ್ಠಾನಕ್ಕೆ ಶಿಕ್ಷಕರನ್ನು ಹೊರತು ಪಡಿಸಿ ಬೇರೆ ವ್ಯವಸ್ಥೆ ಅಥವಾ ಬೇರೆ ಸಿಬ್ಬಂದಿ ನೇಮಕ ಮಾಡಬೇಕು. ಶಿಕ್ಷಕರಿಗೆ ಪಠ್ಯ ಬೋಧನೆಯನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯ ನೀಡದಿರುವ ಕುರಿತು ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಶಿಕ್ಷಕರನ್ನು ಬೋಧನೆಗೆ ಮಾತ್ರ ಸೀಮಿತಗೊಳಿಸಬೇಕು. ಇತರೆ ಆಡಳಿತಾತ್ಮಕ ಹಾಗೂ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದ ಜವಾಬ್ದಾರಿ ಹಾಕಬಾರದು. ಮಧ್ಯಾಹ್ನ ಬಿಸಿಯೂಟ ಹಾಗೂ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಅನುಷ್ಠಾನಕ್ಕೆ ಬೇರೆ ಸಿಬ್ಬಂದಿ ನೇಮಿಸಲು ಹಣಕಾಸಿನ ಪರಿಸ್ಥಿತಿಯ ಕುರಿತು ಯೋಚನೆ ಮಾಡಿದರೆ ಮಕ್ಕಳ ಜೀವನ ಹಾಳಾಗುತ್ತದೆ. ಮಕ್ಕಳ ಭವಿಷ್ಯಕ್ಕಿಂತ ಹಣ ಮುಖ್ಯವಲ್ಲವೆಂಬುದು ನನ್ನ ಅನಿಸಿಕೆ ಎಂದು ಅಭಿಪ್ರಾಯಿಸಿದ್ದಾರೆ.

2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಉತ್ತಮ ಫಲಿತಾಂಶ ಬಾರದಿರುವ ಕಾರಣ ಜಿಲ್ಲಾಧಿಕಾರಿಯವರು ಪ್ರಸಕ್ತ ಸಾಲಿನ ಪ್ರಾರಂಭದಲ್ಲಿಯೇ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರದ ಕುರಿತು ಇತ್ತೀಚೆಗೆ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಶಿಕ್ಷಕರಿಗೆ ಪಠ್ಯ ಬೋಧನೆ ಜತೆಗೆ ಶಾಲಾ ಅವಧಿಯಲ್ಲಿ ಇತರೇ ಆಡಳಿತಾತ್ಮಕ ಹಾಗೂ ಮುಖ್ಯವಾಗಿ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಿಂದ ಬಹಳ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ. ಇಂದು ಬೋಧನೆ ಜತೆ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ, ಗುಣಮಟ್ಟದ ಬಿಸಿಯೂಟದ ತಯಾರಿಕೆ ಎಲ್ಲವನ್ನು ನಿರ್ವಹಣೆ ಮಾಡುವುದು ಶಿಕ್ಷಕರಿಗೆ ಬಹಳ ಕಷ್ಟಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಶಿಕ್ಷಕರ ಪರಿಸ್ಥಿತಿ ಏನಾಗಿದೆಯೆಂದರೆ ಕಲಿಸುವುದನ್ನು ಬಿಟ್ಟು ಎಲ್ಲವನ್ನು ಮಾಡುವಂತಾಗಿದೆ. ಶಿಕ್ಷಕರಿಗೆ ಪಠ್ಯ ಚಟುವಟಿಕೆಗೆ ಸಂಪೂರ್ಣ ಸಮಯ ವಿನಿಯೋಗ ಮಾಡಲು ಅವಕಾಶ ನೀಡಿದರೆ ಮಾತ್ರ ಗುಣಾತ್ಮಕ ಶಿಕ್ಷಣ ಪರಿಕಲ್ಪನೆ ಸಾಕಾರಗೊಳಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರ ಪರಿಸ್ಥಿತಿ ಅರಿತು ಶಿಕ್ಷಕರ ಒತ್ತಡ ಕಡಿಮೆ ಮಾಡುವ ಕುರಿತಂತೆ ಅಗತ್ಯ ಕ್ರಮ ವಹಿಸಬೇಕು. ಎಸ್​ಎಸ್​ಎಲ್​ಸಿಯಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಮಾನ್ಯತೆ, ಅನುದಾನ ಮತ್ತು ಅಂತಹ ವಿಷಯ ಶಿಕ್ಷಕರ ಬಡ್ತಿಯನ್ನು ತಡೆಹಿಡಿಯುವ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಪರೀಕ್ಷಾ ಕೇಂದ್ರಗಳು ಮತ್ತು ಶಿಕ್ಷಕರು ವಾಮ ಮಾರ್ಗ ಅನುಸರಿಸುವುದು ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಇತರೆ ಆಡಳಿತಾತ್ಮಕ ಕಾರ್ಯಗಳ ಜತೆಗೆ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನದ ಹೊರೆಯಿಂದ ಶಿಕ್ಷಕರಿಗೆ ಪಾಠ ಪ್ರವಚನ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಈ ವಿಷಯವನ್ನು ನಾನು ಹತ್ತು ಬಾರಿ ವಿಚಾರಮಾಡಿ ಇದರ ಸಾಧಕ ಬಾಧಕಗಳನ್ನು ಅನೇಕ ಶಿಕ್ಷಣ ತಜ್ಞರ ಜತೆಗೆ ರ್ಚಚಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದೇ ಪದ್ಧತಿ ಮುಂದುವರಿದಲ್ಲಿ ಗುಣಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಿಲ್ಲ ಹಾಗೂ ಉತ್ತಮ ಫಲಿತಾಂಶವನ್ನು ನಿರಿಕ್ಷೀಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net