

ಧಾರವಾಡ: ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿನ ಸಾಧನಕೇರಿ ಬೇಂದ್ರೆ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನಗರದ ಹಿರಿಯ ಜನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪುರ ಅವರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ-2022 ನೀಡಿ ಗೌರವಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಇಮ್ರಾಪುರ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪ್ರಶಸ್ತಿಯು 1 ಲಕ್ಷ ರೂ. ಮೊತ್ತ ಹಾಗೂ ಫಲಕ ಹೊಂದಿದೆ.
ಪ್ರಶಸ್ತಿ ಪುರಸ್ಕೃತ ಡಾ. ಸೋಮಶೇಖರ ಇಮ್ರಾಪುರ ಮಾತನಾಡಿ, ನನಗೆ ಹಲವು ಪ್ರಶಸ್ತಿಗಳು ಸಂದಿವೆ. ಆದರೆ, ಕಾವ್ಯ ಗುರು ದ.ರಾ. ಬೇಂದ್ರೆ ಹೆಸರಿನ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಬೇಂದ್ರೆ ಬಗ್ಗೆ ಮಾತನಾಡುವುದು ಮುಗಿಯದ ಕತೆ ಇದ್ದಂತೆ. ಅವರ ಕಾವ್ಯದ ಹೊಳಹು ಮುಗಿಯದು. ನಾದ ಎನ್ನುವುದು ಬೇಂದ್ರೆ ಹುಟ್ಟು ಗುಣ ಎಂದರು.
ಬೇಂದ್ರೆ ಮಾತುಗಳು ಸಹ ಕಾವ್ಯದಂತಿದ್ದವು. ಅವರ ಕಾವ್ಯ ಕ್ರಿಯೆಯಲ್ಲಿ ಸಹಜತೆ ಕಾಣುತ್ತಿತ್ತು. ಅದನ್ನು ಅನುಕರಣೆ ಮಾಡುವುದು ಅಸಾಧ್ಯ. ಬೇಂದ್ರೆ ನಾನು ಮೆಚ್ಚಿದ ವ್ಯಕ್ತಿ. ಅವರು ಇಲ್ಲ ಎಂಬ ಭಾವನೆ ಎಂದಿಗೂ ಬಂದಿಲ್ಲ. ಸಹೃದಯರಾಗಿದ್ದ ಅವರು ಹಾಡುತ್ತ ಬರೆಯುತ್ತಿದ್ದರು. ಅವರ ಕಾವ್ಯದ ಅರ್ಥ, ಆಳ ಅರಿಯುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ದ.ರಾ. ಬೇಂದ್ರೆ ಪ್ರಶಸ್ತಿಗೆ ಡಾ. ಸೋಮಶೇಖರ ಇಮ್ರಾಪುರ ಆಯ್ಕೆ ಅತ್ಯಂತ ಖುಷಿ ಸಂಗತಿ. ಪ್ರಶಸ್ತಿಗಳು ಅನೇಕರಿಗೆ ಸಿಗುತ್ತವೆ. ಆದರೆ, ಉತ್ತಮರನ್ನು ಆಯ್ಕೆ ಮಾಡುವುದು ಮುಖ್ಯ. ಆ ಕಾರ್ಯವನ್ನು ಆಯ್ಕೆ ಸಮಿತಿ ನಿಷ್ಠೆಯಿಂದ ಮಾಡಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದರು.
ಡಾ. ಸೋಮಶೇಖರ ಪ್ರಶಸ್ತಿಗಾಗಿ ಎಂದಿಗೂ ಲಾಬಿ ಮಾಡಿದವರಲ್ಲ. ಇಂತಹವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಗೂ ಒಂದು ಗೌರವ ಸಿಗಲಿದೆ. ಸೋಮಶೇಖರ ಇಮ್ರಾಪುರ ಯಾವುದೇ ವಿಷಯ ಇದ್ದರೂ ಅದಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಡಾ. ದ.ರಾ. ಬೇಂದ್ರೆ ಕಾವ್ಯವನ್ನು ಯುವಕರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಈ ಕುರಿತು ಟ್ರಸ್ಟ್ ಗಂಭೀರ ಚಿಂತನೆ ನಡೆಸಿ, ತಿಂಗಳಿಗೆ ಒಮ್ಮೆ ಸುಮಾರು 20 ಯುವಕರಿಗೆ ಒಂದು ವಾರದ ಶಿಬಿರ ನಡೆಸುವ ಮೂಲಕ ಬೇಂದ್ರೆ ಅವರನ್ನು ಸಮಗ್ರವಾಗಿ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಕಥೆಗಾರ ಡಾ. ಸಂಗಮನಾಥ ಲೋಕಾಪುರ ಮಾತನಾಡಿದರು. ಮಲ್ಲಿಕಾರ್ಜುನ ಹಿರೇಮಠ, ಪ್ರಕಾಶ ಬಾಳಿಕಾಯಿ, ಟ್ರಸ್ಟ್ ಸದಸ್ಯ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಶಾಂತಾ ಇಮ್ರಾಪುರ, ಧನವಂತ ಹಾಜವಗೋಳ, ಶ್ರೀಶೈಲ ಹುದ್ದಾರ, ಶಂಕರ ಹಲಗತ್ತಿ, ಇತರರು ಇದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು.
ಕವಿ ದಿನವನ್ನಾಗಿ ಘೊಷಿಸಲಿ: ಕುವೆಂಪು ಹಾಗೂ ಡಾ. ದ.ರಾ. ಬೇಂದ್ರೆ ಅವರು ಸಾಹಿತ್ಯ ಲೋಕದ ಎರಡು ಕಣ್ಣುಗಳಿದ್ದಂತೆ. ಆದರೆ ಕುವೆಂಪು ಅವರಿಗೆ ಸಿಕ್ಕ ಮನ್ನಣೆ ಬೇಂದ್ರೆ ಅವರಿಗೆ ಸಿಕ್ಕಿಲ್ಲ. ಕುವೆಂಪು ಜನ್ಮದಿನವನ್ನು ವಿಶ್ವ ಮಾನವ ದಿನ ಎಂದು ಆಚರಿಸಲಾಗುತ್ತಿದೆ. ಅದೇ ರೀತಿ ಬೇಂದ್ರೆ ಜನ್ಮದಿನವನ್ನು ಕವಿ ದಿನವನ್ನಾಗಿ ಸರ್ಕಾರ ಘೊಷಣೆ ಮಾಡಬೇಕು. ಸದ್ಯ ಸರ್ಕಾರ ಉನ್ನತ ಹುದ್ದೆ ಅಲಂಕರಿಸುವವರು (ಮುಖ್ಯಮಂತ್ರಿ ಹಾಗೂ ಸಭಾಪತಿ) ಧಾರವಾಡ ಜಿಲ್ಲೆಯವರೇ ಆಗಿದ್ದರಿಂದ ಈ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮಾಡಬೇಕು ಎಂದು ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮನವಿ ಮಾಡಿದರು.