ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಚರ್ಚಿಸಲು ಆಸಕ್ತ ಸಮಾನ ಮನಸ್ಕರ ಚಿಂತನ ಮಂಥನ ಸಭೆಯನ್ನು ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನ.29ರಂದು ಸಾಯಂಕಾಲ 5ಕ್ಕೆ ಆಯೋಜಿಸಲಾಗಿದೆ. ಆಸಕ್ತರು ಪಾಲ್ಗೊಂಡು ಸಲಹೆ, ಸೂಚನೆ ನೀಡಬಹುದು ಎಂದು ಡಾ.ಜಿ.ಜಿ. ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಜಿಲ್ಲೆಯವರು ತುರ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ದೂರದ ಪಣಜಿ, ಮಂಗಳೂರು, ಶಿವಮೊಗ್ಗ ಇಲ್ಲವೇ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆ ಇದೆ. ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಸರ್ಕಾರದ 11 ಎಕರೆ ಜಾಗ ಇದೆ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾತ್ರ ಆಗುತ್ತಿಲ್ಲ. ಸರ್ಕಾರದ ದಾರಿ ಕಾಯುತ್ತ ಕೂರದೇ ಸಮಾಜದ ಗಣ್ಯರು, ಮುಖಂಡರು, ಚಿಂತಕರು ಒಂದೆಡೆ ಸೇರಿ ಹೂಡಿಕೆದಾರರನ್ನು ಸಂಪರ್ಕಿಸಿ ಮತ್ತು ಸಿಎಸ್‌ಆರ್ ಫಂಡ್ ಮೂಲಕ ಪರ್ಯಾಯ ಪ್ರಯತ್ನ ಮಾಡಲು ಇದು ಸಕಾಲ. ಇದೊಂದು ಸಾಂಘಿಕ ಪ್ರಯತ್ನವಾಗಿದ್ದು ಪಕ್ಷಾತೀತ, ಜಾತ್ಯತೀತ ಮತ್ತು ರಾಜಕೀಯ ರಹಿತ ಜನಾಂದೋಲನವಾಗಿದೆ. ಇದಕ್ಕೆ ಯಾವುದೇ ಪದಾಧಿಕಾರಿಗಳು ಇರುವುದಿಲ್ಲ. ಸಾಮೂಹಿಕ ನಾಯಕತ್ವದಡಿ ಜಿಲ್ಲೆಯ ಒಳಿತಿಗೆ ಹೋರಾಟವಾಗಿದ್ದು ಎಲ್ಲರೂ ಮುಕ್ತವಾಗಿ ಭಾಗವಹಿಸಿ ಅನಿಸಿಕೆ ಹಂಚಿಕೊಂಡು, ಮುಂದೇನು ಮಾಡಬೇಕು ಎನ್ನುವುದನ್ನು ಚಿಂತನ-ಮಂಥನ ಸಭೆಯಲ್ಲಿ ಚರ್ಚಿಸೋಣ ಮತ್ತು ಅದನ್ನು ಕಾರ್ಯರೂಪಕ್ಕೆ ತರೋಣ ಎಂದು ಡಾ. ಜಿ.ಜಿ.ಹೆಗಡೆ ತಿಳಿಸಿದ್ದಾರೆ.