

ಮಡಿಕೇರಿ: ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದು, ಮಕ್ಕಳು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಹೇಳಿದರು.
ಮಾಯಮುಡಿ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಪೌಂಡೇಶನ್ ವತಿಯಿಂದ ಗ್ರಾ.ಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಆದ್ದರಿಂದ ಮಕ್ಕಳು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕಷ್ಟಪಟ್ಟು ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಷ್ಟಪಟ್ಟು ಓದಿ ಗುರಿಯನ್ನು ತಲುಪಬೇಕು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ, ಮೆಟ್ಟಲಕೋಡ್ ಶಾಲಾ ಮುಖ್ಯ ಶಿಕ್ಷಕಿ ಸೋಪಿಯಾ, ಪರೀಕ್ಷಾ ಮಾರ್ಗದರ್ಶಕ ಅದೇಂಗಡ ಶೋಭಾ, ಶಿಕ್ಷಕರಾದ ಡಿ.ಯು.ರಾಗಿಣಿ, ಸುಮಿತ ರವಿ, ನಳಿನಿ, ಎಂ.ಟಿ.ಸತ್ಯ, ಪಿ.ವಿ.ಲಾಯ್ದ, ಎಂ.ಕೆ.ಲೀಲ ಉಪಸ್ಥಿತರಿದ್ದರು.
ಗಣಿತ ಸ್ಪರ್ಧೆಯಲ್ಲಿ ರುದ್ರಬೀಡು ಹಿರಿಯ ಪ್ರಾಥಮಿಕ ಶಾಲೆ, ಚನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ವಿಜೇತರು: ೪ನೇ ತರಗತಿ ವಿಭಾಗದಲ್ಲಿ ವಿ.ಎ.ಹಜನಾಶ್(ಪ್ರ), ಪಿ.ಎಂ.ಶಶಾಂತ್(ದ್ವಿ), ಎನ್.ಜಿ.ವರುಣ್ ತೃತೀಯ ಬಹುಮಾನ ಪಡೆದರು. ೫ನೇ ತರಗತಿ ವಿಭಾಗದಲ್ಲಿ ಸಿ.ಸಾನಿಯಾ, ಎಚ್.ಡಿ.ಭುವನ್(ಪ್ರ), ಪಿ.ವಿ.ಕುಶಿಲ್(ದ್ವಿ), ಪಿ.ಜಿ.ಕೆರೋಲಿನ್ ತೃತೀಯ ಬಹುಮಾನ ಗೆದ್ದುಕೊಂಡರು. ೬ನೇ ತರಗತಿ ವಿಭಾಗದಲ್ಲಿ ಪಿ.ಆರ್.ವೀಕ್ಷ ದೇಚಮ್ಮ(ಪ್ರ), ಸಿ.ಎಂ.ಜಯಿಸನ್(ದ್ವಿ), ಎಚ್.ನಾಗೇಶ್ ತೃತೀಯ ಸ್ಥಾನ ಪಡೆದರು.