

ಮಂಗಳೂರು: ಮಾರಕ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಅರೆ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಕೃತಜ್ಞತಾ ಚಪ್ಪಾಳೆ’ಗೆ ವ್ಯಾಪಕ ಬೆಂಬಲ ನೀಡಿದ್ದ ಸಾರ್ವಜನಿಕರು, ಅದೇ ಮಾದರಿಯಲ್ಲಿ ದೀಪ ಬೆಳಗಿಸುವ ಕೋರಿಕೆಗೆ ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ.
ಕರೊನಾ ವೈರಸ್ ಎಂಬ ಅಂಧಕಾರದ ವಿರುದ್ಧ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಎಲ್ಲರೂ ಒಗ್ಗಟ್ಟಾಗಿ ದೀಪ ಹಚ್ಚುವ ಮೂಲಕ ಹೋರಾಟ ನಡೆಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು. ಅದರಂತೆ ಮಂಗಳೂರು ನಗರ ಸೇರಿದಂತೆ, ಜಿಲ್ಲೆಯ ಎಲ್ಲ ತಾಲೂಕು, ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಹಣತೆ, ಕ್ಯಾಂಡಲ್, ಟಾರ್ಚ್, ಮೊಬೈಲ್ ಲೈಟ್‌ಗಳನ್ನು ಬೆಳಗಿಸಿ ಕರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ರಾತ್ರಿ ಸರಿಯಾಗಿ 9 ಗಂಟೆಯಾಗುತ್ತಿದ್ದಂತೆ ಎಲ್ಲೆಡೆ ಲೈಟ್ ಆಫ್ ಆಗಿದ್ದು, ಜನರು ಮನೆ ಮುಂದೆ, ಬಾಲ್ಕನಿ, ತಾರಸಿ ಮೇಲೆ ನಿಂತು ದೀಪ ಬೆಳಗಿಸಿದ್ದಾರೆ. ಮಕ್ಕಳು, ಹಿರಿಯರೂ ದೀಪ ಬೆಳಗಿಸಲು ವಿಶೇಷ ಆಸಕ್ತಿ ತೋರಿಸಿದ್ದಾರೆ. 9ಗಂಟೆಯಿಂದು 9 ನಿಮಿಷಗಳ ಕಾಲ ದೀಪಗಳು ಬೆಳಗಿವೆ. ಇದರಿಂದ ವಿದ್ಯುತ್ ಗ್ರಿಡ್‌ಗಳಲ್ಲಿ ಯಾವುದೇ ಸಮಸ್ಯೆಯುಂಟಾಗಿಲ್ಲ.
ಜನಪ್ರತಿನಿಧಿಗಳಿಂದಲೂ ಸ್ಪಂದನೆ: ಜಿಲ್ಲೆಯ ಜನ ಪ್ರತಿನಿಧಿಗಳೂ ಪ್ರಧಾನಿ ಕರೆಗೆ ಸ್ಪಂದಿಸಿದ್ದಾರೆ. ಶಾಸಕರು, ಸಂಸದರು, ಬಿಜೆಪಿಯ ಜಿಪಂ, ತಾಪಂ, ಮಹಾನಗರ ಪಾಲಿಕೆ ಸದಸ್ಯರೂ ತಮ್ಮ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದ್ದಾರೆ. ಕ್ರಿಶ್ಚಿಯನ್ನರು ಕ್ಯಾಂಡಲ್ ಹಾಗೂ ಕೆಲವು ಮುಸ್ಲಿಂ ಸಮುದಾಯದವರೂ ತಮ್ಮ ಮನೆಗಳಲ್ಲಿ ಟಾರ್ಚ್ ಲೈಟ್, ಮೊಬೈಲ್ ಲೈಟ್ ಬೆಳಗಿಸಿ ಪ್ರಧಾನಿ ಕರೆಯನ್ನು ಬೆಂಬಲಿಸಿದ್ದಾರೆ. ದೀಪದ ಹಿನ್ನೆಲೆಯಲ್ಲಿ ಕೆಲವು ಮನೆಗಳಲ್ಲಿ ದೇಶಭಕ್ತಿ ಗೀತೆ ಕೇಳಿಸಿದರೆ, ಫ್ಲಾೃಟ್‌ಗಳಲ್ಲಿ ಭಾರತ ಮಾತೆಗೆ ಜಯಘೋಷ ಕೇಳಿಸಿತು.
ಫ್ಲಾೃಟ್‌ಗಳಲ್ಲಿ ಆಕರ್ಷಣೆ: ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಮಂಗಳೂರು ನಗರದ ಕೆಲವೊಂದು ಫ್ಲಾೃಟ್‌ಗಳಲ್ಲಿ ರಾತ್ರಿ 9 ಗಂಟೆಗೆ ಆಗುತ್ತಿದ್ದಂತೆ ಒಮ್ಮೆಲೇ ಕತ್ತಲಾಗಿದೆ. ಬಳಿಕ ಅಲ್ಲಿನ ನಿವಾಸಿಗಳು ಬಾಲ್ಕನಿಗೆ ಬಂದು ದೀಪಗಳನ್ನು ಬೆಳಗಿಸಿದ್ದಾರೆ. ಒಂದು ಕ್ಷಣ ದೀಪಾವಳಿ ಮತ್ತೆ ಬಂತೋ ಎಂಬಂತೆ ಭಾಸವಾಯಿತು. ಕ್ಯಾಂಡಲ್, ಹಣತೆ ದೀಪದ ಬೆಳಕಿನಲ್ಲಿ ಫ್ಲಾೃಟ್‌ಗಳು ಆಕರ್ಷಕವಾಗಿ ಕಾಣಿಸಿದವು.
ಉಡುಪಿಯಲ್ಲೂ ದೀಪಾಸ್ತ್ರ: ಉಡುಪಿ: ಕರೊನಾ ಜಾಗೃತಿಗೆ ದೀಪ ಹಚ್ಚುವ ಮೂಲಕ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅಪಾರ್ಟಮೆಂಟ್‌ಗಳಲ್ಲಿ ವಾಸಿಸುತ್ತಿರುವವರು ಬಾಲ್ಕನಿಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ಹಳ್ಳಿಗಳಲ್ಲಿ ಜನರು ಮನೆಯ ಮುಂಭಾಗ ಮತ್ತು ತುಳಸಿ ಕಟ್ಟೆ, ಬಾವಿ ಕಟ್ಟೆಗಳಲ್ಲಿ ದೀಪ ಹಚ್ಚಿ ದೀಪಾವಳಿಯನ್ನು ನೆನಪಿಸಿದರು. ಕ್ರೈಸ್ತರು ಮೇಣದ ಬತ್ತಿಗಳನ್ನು ಬೆಳಗಿದರು. ದೇವಸ್ಥಾನ ಮತ್ತು ಚರ್ಚಗಳಲ್ಲೂ ದೀಪಗಳನ್ನು ಬೆಳಗಿಸಲಾಗಿತ್ತು. ಕೆಲವು ಮನೆಗಳಲ್ಲಿ ದೀಪ ಹಚ್ಚಿ ಶಂಖ ಊದಿದರು. ಕೆಲವರು ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂತು. ಕಲ್ಸಂಕ-ಗುಂಡಿಬೈಲು ರಸ್ತೆ, ಬ್ರಹ್ಮಾವರ ಭಾಗಗಳಲ್ಲಿ ಕೆಲವು ಕಿಡಿಗೇಡಿಗಳು ಪಟಾಕಿ ಹೊಡೆದ ಘಟನೆಯೂ ನಡೆದಿದೆ.