

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಭಾನುವಾರ ಕ್ಷೇತ್ರ ಸ್ವಚ್ಛತೆ ಅಭಿಯಾನದಡಿ ಯುವ ಬ್ರಿಗೇಡ್ ಮತ್ತು ಮೈಸೂರಿನ ಎನ್.ಐ.ಇ ಕಾಲೇಜಿನ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕಳೆದ ದೀಪಾವಳಿ ಹಬ್ಬದ ಸಂದರ್ಭ ಬೆಟ್ಟದಪುರದಲ್ಲಿ ನಡೆದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀವಟಿಗೆ ಮಹೋತ್ಸವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮೂರು ನಾಲ್ಕು ದಿನಗಳಿಂದ ಬೆಟ್ಟ ಹತ್ತಿ ದೇವರ ದರ್ಶನ ಪಡೆದಿದ್ದರು. ಆಗಮಿಸಿದ ಭಕ್ತರು, ಯುವಕ ಯುವತಿಯರು ತಾವು ತಿಂದಂತಹ ತಿಂಡಿ ತಿನಿಸಿನ ಪ್ಲಾಸ್ಟಿಕ್ ಕವರ್, ನೀರಿನ ಬಾಟಲ್‌ಗಳು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಿಸಾಡಿ ಹೋಗಿದ್ದರು. ಈ ಪರಿಣಾಮ ಅಶುಚಿತ್ವ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ ಸ್ವಯಂ ಸೇವಕರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿ, ಪರಿಸರ ಸಂರಕ್ಷಣೆಗೆ ಮುಂದಾದರು.
ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಸದಸ್ಯ ಗಿರೀಗೌಡ, ಎನ್‌ಐಇ ಕಾಲೇಜಿನ ಡಾ.ಶರತ್ ಚಂದ್ರ, ಯುವ ಬ್ರಿಗೇಡ್ ಪದಾಧಿಕಾರಿಗಳಾದ ನಂಜನಗೂಡು ಚಂದ್ರಶೇಖರ್, ಗೊರಳ್ಳಿ ಅಶ್ವಥ್, ನಮೋ ಮಲ್ಲೇಶ್, ರಾಮನುಜ, ಪ್ರಶಾಂತ್, ಪ್ರವೀಣ್, ರುದ್ರೇಶ್, ಅಭಿ, ಸುರೇಶ, ಅಮಿತ್, ಪವನ್, ಪ್ರಜ್ವಲ್, ಮದನ್, ದೇವಸ್ಥಾನದ ಅರ್ಚಕ ಕೃಷ್ಣಪ್ರಸಾದ್ ಸೇರಿದಂತೆ ಸ್ವಯಂಸೇವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.