ಲೈಟ್‌ಫಿಶಿಂಗ್‌ಗೆ ಬದುಕು ದುರ್ಬರ

DONI NEW
Published on

ಉಳ್ಳಾಲ: ಲೈಟ್‌ಫಿಶಿಂಗ್ ಕಾನೂನು ಬಾಹಿರ ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಆದರೂ ಉಳ್ಳಾಲ ಭಾಗದಲ್ಲಿ ಲೈಟ್‌ಫಿಶಿಂಗ್ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರ ಪರಿಣಾಮ ಉಳ್ಳಾಲದ ಕೋಟೆಪುರ, ಕೋಡಿಯಲ್ಲಿ ನಾಡದೋಣಿಗಳು ತಟ ಸೇರಿವೆ. ಮೀನುಗಾರರ ಕುಟುಂಬ ಕಂಗಾಲಾಗಿದ್ದು, ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿದೆ.

ಉಳ್ಳಾಲ ಭಾಗದಲ್ಲಿ ಪ್ರತಿವರ್ಷ ಸುಮಾರು 150ರಷ್ಟು ನಾಡದೋಣಿಗಳು ಮೀನುಗಾರಿಕೆಯಲ್ಲಿ ನಿರತವಾಗಿರುತ್ತದೆ. ಈ ಕಾಯಕವನ್ನೇ ನಂಬಿ ಕುಟುಂಬ ಮುನ್ನಡೆಯುತ್ತಿದೆ. ಕಳೆದ ಮೂರು ವರ್ಷದ ಹಿಂದೆ ಲೈಟ್‌ಫಿಶಿಂಗ್ ಮತ್ತು ಬುಲ್ಟ್ರಾಲ್ ಫಿಶಿಂಗ್ ಆರಂಭಗೊಂಡಾಗ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರು ಕಂಗಾಲಾದರು. ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೊಂದು ಅವೈಜ್ಞಾನಿಕ ಮೀನುಗಾರಿಕೆ ಎಂದು ನ್ಯಾಯಾಲಯವೂ ತೀರ್ಪು ನೀಡಿದೆ. ಇದರಿಂದ ಕಳೆದ ವರ್ಷ ಉಳ್ಳಾಲ ಭಾಗದಲ್ಲಿ ಲೈಟ್‌ಫಿಶಿಂಗ್ ನಿಂತಿತ್ತು.

ಮತ್ತೆ ಶುರುವಾದ ಲೈಟ್ ಫಿಶಿಂಗ್: ಕಳೆದ ವರ್ಷ ಇಲ್ಲದ ಲೈಟ್‌ಫಿಶಿಂಗ್ ಈ ಬಾರಿ ಮತ್ತೆ ಆರಂಭಗೊಂಡಿದೆ. ಕಳೆದ 3 ತಿಂಗಳಿಂದ ರಾತ್ರಿ ವೇಳೆ ಈ ದಂಧೆ ನಡೆಯುತ್ತಿದ್ದು, ಇದರಿಂದಾಗಿ ನಾಡದೋಣಿ ಮೀನುಗಾರರು ದೋಣಿಗಳನ್ನು ದಡದಲ್ಲೇ ಲಂಗರು ಹಾಕಿದ್ದಾರೆ. ಇದರಿಂದ ಸುಮಾರು ಸಾವಿರದಷ್ಟು ಕುಟುಂಬ ಕಂಗಾಲಾಗಿದೆ. ಮಳೆಗಾಲದಲ್ಲಿ ಮಕ್ಕಳ ಶಿಕ್ಷಣ, ಇತರ ಖರ್ಚಿಗೆಂದು ಸೊಸೈಟಿಗಳಿಂದ ಪಡೆದ ಸಾಲ ತೀರಿಸಲಾಗದೆ ಹತಾಶರಾಗಿ ಕಣ್ಣೀರು ಹಾಕುವಂತಾಗಿದೆ.

ಅಧಿಕಾರಿಗಳು ಮೌನ:ಕೇರಳದಲ್ಲಿ ಲೈಟ್ ಫಿಶಿಂಗ್‌ಗೆ ಮುಂದಾದವರನ್ನು ಅಲ್ಲಿನ ಮೀನುಗಾರರು ಹೊಡೆದು ಓಡಿಸಿರುವುದರಿಂದ ಆ ಭಾಗದತ್ತ ತಲೆ ಹಾಕಲು ಹೆದರುತ್ತಿರುವ ದಂಧೆಕೋರರು, ಉಳ್ಳಾಲ ಭಾಗದಲ್ಲಿ ಸುತ್ತುತ್ತಿದ್ದಾರೆ. ನ್ಯಾಯಾಲಯ ಆದೇಶ ಜಾರಿಗೆ ತಂದು ತಮಗೆ ನ್ಯಾಯ ದೊರಕಿಸಿ ಎಂದು ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ಕಳೆದ ಮೂರು ತಿಂಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿಗೆ ಅಲೆದಾಡಿ ಸೋತಿದ್ದಾರೆ. ಆದರೆ, ಲೈಟ್‌ಫಿಶಿಂಗ್ ನಡೆಸುವ ಬೋಟ್‌ಗಳನ್ನು ಹಿಡಿದುಕೊಡಿ ಎಂದು ಮೀನುಗಾರಿಕಾ ಇಲಾಖೆಯಿಂದ ಉತ್ತರ ಬರುತ್ತಿದೆ ಎನ್ನುವ ಅರೋಪ ಕೇಳಿ ಬಂದಿದೆ.

ಬಿಗು ನಿಯಮವಿಲ್ಲ: ಕೇರಳದಲ್ಲಿ ಈ ರೀತಿ ಅವೈಜ್ಞಾನಿಕ ಮೀನುಗಾರಿಕೆ ನಡೆಸಿದರೆ 5 ಲಕ್ಷ ರೂ.ಗೂ ಅಧಿಕ ಮೊತ್ತದ ದಂಡ ಹಾಕಿ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಆದರೆ ರಾಜ್ಯದಲ್ಲಿ ಕೇವಲ 5 ಸಾವಿರ ರೂ. ದಂಡ ಹಾಕಲಾಗುತ್ತದೆ. ಈ ನಿಯಮ ಜಾರಿಗೆ ಬಂದಿ ಸರಿಸುಮಾರು 40 ವರ್ಷಗಳೇ ಕಳೆದಿವೆ ಎನ್ನುತ್ತಾರೆ ನಾಡದೋಣಿ ಮೀನುಗಾರರು.

ಮೀನುಗಾರಿಕಾ ಇಲಾಖೆ ಸಮಸ್ಯೆ: ಲೈಟ್‌ಫಿಶಿಂಗ್ ಸಮಸ್ಯೆ ಬಗೆಹರಿಸುವುದು ಮೀನುಗಾರಿಕಾ ಇಲಾಖೆ ಮೇಲಿದೆ. ಆದರೆ ಈ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಸಮುದ್ರಕ್ಕೆ ಹೋಗಿ ಬೋಟುಗಳನ್ನು ಹಿಡಿಯಲು ಅಗತ್ಯವಿರುವ ಪರಿಕರಗಳ ಕೊರತೆಯಿದೆ. ಈ ಕಾರಣದಿಂದ ಇಲಾಖೆ ಕರಾವಳಿ ಕಾವಲು ಪಡೆಯ ಮೊರೆ ಹೋಗಿದೆಯಾದರೂ, ಆ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಕೇರಳದಲ್ಲಿ ಎಲ್ಲ ಸೌಕರ್ಯಗಳು ಇರುವುದರಿಂದ ಮೀನುಗಾರಿಕಾ ಇಲಾಖೆಯೇ ನೇರವಾಗಿ ದಾಳಿ ನಡೆಸಿ ದಂಡ ಹಾಕುತ್ತಿದೆ.

ಲೈಟ್‌ಫಿಶಿಂಗ್ ಮತ್ತು ಬುಲ್ ಟ್ರಾಲ್ ಮೀನುಗಾರಿಕೆೆಗೆ ಈಗಾಗಲೇ ನಿಷೇಧವಿದೆ. ಆದರೂ ಕಾನೂನುಬಾಹಿರವಾಗಿ ನಡೆಯುತ್ತಿರುವುದರಿಂದ ನಾಡದೋಣಿ ಮೀನುಗಾರರಲ್ಲಿ ಬೇಸರ ಇದೆ. ಇದನ್ನು ಪರಿಗಣಿಸಿ ಇಲಾಖಾಧಿಕಾರಿಗಳ ವಿಶೇಷ ಸಭೆ ಕರೆಯುತ್ತೇನೆ. ಮುಂದಿನ ಅಧಿವೇಶನದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರುತ್ತೇವೆ. ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಉಳ್ಳಾಲದಲ್ಲಿ ಸುಮಾರು ಸಾವಿರ ಕುಟುಂಬ ನಾಡದೋಣಿ ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿದೆ, ಮೂರು ತಿಂಗಳಿಂದ ಲೈಟ್‌ಫಿಶಿಂಗ್ ಮೀನುಗಾರಿಕೆ ನಡೆಯುತ್ತಿರುವುದರಿಂದ ಈ ಕುಟುಂಬ ಸಂಕಷ್ಟಕ್ಕೀಡಾಗಿದ್ದು, ಉತ್ತರ ಕನ್ನಡದಲ್ಲಿ ರೈತರಂತೆ ಇಲ್ಲಿ ನಾಡದೋಣಿ ಮೀನುಗಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಹನೀಫ್ ಸೋಲಾರ್, ಅಧ್ಯಕ್ಷ, ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ನಮ್ಮಲ್ಲಿ ಸಮುದ್ರಕ್ಕೆ ಹೋಗಿ ವಶಕ್ಕೆ ಪಡೆಯುವ ಸಾಧನ ಇಲ್ಲದ ಕಾರಣ, ಕರಾವಳಿಪಡೆ ಮೊರೆ ಹೋಗಬೇಕಾಗಿದೆ. ಕಾನೂನುಬಾಹಿರ ಮೀನುಗಾರಿಕೆಗೆ ಕೇವಲ 5 ಸಾವಿರ ರೂ. ದಂಡ ಹಾಕಬಹುದಾಗಿದ್ದು, 40 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮ. ಕೇರಳ ಮಾದರಿ ನಿಯಮ ಇಲ್ಲಿಯೂ ರೂಪಿಸಲಾಗಿದ್ದು, ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದೆರೆಡು ತಿಂಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ. ತಿಪ್ಪೇಸ್ವಾಮಿ ಡಿ., ಉಪನಿರ್ದೇಶಕ, ಮೀನುಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net