ದೀಪಾವಳಿಗೆ ಗೋಮಯ ದೀಪಗಳು ಸಿದ್ಧ, ಘಾಟಿ ಸಮೀಪದ ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ ತಯಾರಿಕೆ

7Rural1
Published on

ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ

ಈ ಬಾರಿ ದೀಪಾವಳಿ ಹಬ್ಬಕ್ಕೆ ದೇಸಿ ತಳಿ ಹಸುಗಳ ಸಗಣಿಯಿಂದ ದೀಪ ತಯಾರಿಕೆಗೆ ರಾಷ್ಟ್ರೋತ್ಥಾನ ಗೋಶಾಲೆ ಮುಂದಾಗಿದೆ. ಈ ದೀಪಗಳನ್ನು ಸಗಣಿ ದೀಪ, ಗೋಮಯ ದೀಪ, ಅಗ್ನಿಹೊತ್ರ ದೀಪ ಎಂದು ಕರೆಯಲಾಗುತ್ತದೆ.

ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ದೀಪಕ್ಕಿಂತ ಗೋಮಯ ದೀಪಗಳ ಬೆಲೆ ಕಡಿಮೆಯಿದ್ದು, ಪರಿಸರ ಪೂರಕ ಹಾಗೂ ಆರೋಗ್ಯದಾಯಕವಾಗಿರುತ್ತವೆ. ಘಾಟಿ ಸಮೀಪ ಇರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ 50 ಸಾವಿರ ದೀಪಗಳನ್ನು ತಯಾರಿಸಲಾಗುತ್ತಿದೆ.

ಮಲೆನಾಡು ಗಿಡ್ಡ, ಹಳ್ಳಿಕಾರ್ ಹಾಗೂ ನಾಟಿ ತಳಿ ಹಸುಗಳ ಸಗಣಿ ಬಳಕೆ ಮಾಡಲಾಗುತ್ತದೆ. ಮೂರು ಕೆಜಿ ಸಗಣಿಗೆ 100 ಗ್ರಾಂ ಮರದ ಪೌಡರ್, 30 ಗ್ರಾಂ ಮರದ ಅಂಟು, 50 ಗ್ರಾಂ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ನಾದಬೇಕು. ಇದರಿಂದ ಹಣತೆಗಳಲ್ಲಿ ಎಣ್ಣೆ ಸೋರುವುದು, ಬಿರುಕು ಉಂಟಾಗುವುದಿಲ್ಲ. ಚೆನ್ನಾಗಿ ನಾದಿದ ಸಗಣಿ ಮಿಶ್ರಣವನ್ನು ಅಚ್ಚುಗಳ ಮೂಲಕ ಒತ್ತಿ ಹಣತೆಗಳಿಗೆ ಬೇಕಾದ ಆಕಾರ ಕೊಡಲಾಗುತ್ತದೆ. ಇದರಿಂದ ಕನಿಷ್ಠ 250 ಹಣತೆ ತಯಾರಿಸಬಹುದು.

ಸಗಣಿ ದೀಪದ ವಿಶೇಷತೆ: ಮಣ್ಣಿನ ದೀಪ ಮಾರುಕಟ್ಟೆಯಲ್ಲಿ 5ರಿಂದ 8 ರೂ. ಇದ್ದರೆ ಸಗಣಿ ದೀಪ 4ರಿಂದ 5 ರೂ.ಗೆ ಸಿಗುತ್ತದೆ. ದೀಪವನ್ನು ಮೆಟಲ್ ಅಥವಾ ಕಲ್ಲಿನ ಮೇಲಿಡಬೇಕು. ಈ ದೀಪವನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯ. ತುಪ್ಪದಲ್ಲಿ ಹಚ್ಚಿದ ಮೇಲೆ ಅದು ಸಂಪೂರ್ಣ ಉರಿದ ಮೇಲೆ ಇಡಿ ದೀಪವು ಧೂಪವಾಗಿ ಉರಿದು ಹೋಗುತ್ತದೆ. ತುಪ್ಪದಲ್ಲಿ ಹಚ್ಚಿದ ದೀಪವು ಅಗ್ನಿಹೊತ್ರದಷ್ಟೇ ಪವಿತ್ರವಾಗಿದ್ದು ಹೋಮದ ಫಲ ಲಭಿಸುತ್ತದೆ.

33 ಕೋಟಿ ದೀಪ ಹಚ್ಚುವ ಗುರಿ:  ದೇಶದಲ್ಲಿ ಈ ಬಾರಿ 33 ಕೋಟಿ ಸಗಣಿ ದೀಪ ಹಚ್ಚಲು ನಿರ್ಧರಿಸಲಾಗಿದೆ. ರಾಷ್ಟ್ರೋತ್ಥಾನ ಗೋಶಾಲೆಗೆ 50 ಲಕ್ಷ ದೀಪಗಳಿಗೆ ಬೇಡಿಕೆ ಬಂದಿದೆ. ದೀಪಾವಳಿ ಸಮಯದಲ್ಲಿ ಚೀನಾದಿಂದ 50 ಲಕ್ಷ ಹಣತೆಗಳು ಆಮದಾಗುತ್ತಿದ್ದು, ಸ್ಥಳೀಯ ಕುಂಬಾರರು ಕೆಲಸ ಕಳೆದುಕೊಂಡಿದ್ದಾರೆ. ಸಗಣಿ ದೀಪ ತಯಾರಿಸುವುದರಿಂದ ಸ್ಥಳೀಯ ರೈತರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.

ಈ ಬಾರಿ 50 ಸಾವಿರ ಸಗಣಿ ದೀಪಗಳಿಗೆ ಬೇಡಿಕೆ ಬಂದಿದೆ. ರೈತರು ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಪ್ರತಿದಿನ 300 ರಿಂದ 500 ರೂಪಾಯಿ ಆದಾಯ ಪಡೆಯಬಹುದು. ತುಪ್ಪದಿಂದ ಹಚ್ಚಿದ ಈ ದೀಪವು ಧೂಪವಾಗಿ ಸಂಪೂರ್ಣವಾಗಿ ಉರಿದು ಹೋಗಿ ಸನಾತನ ಸಂಸ್ಕೃತಿಯ ಅಗ್ನಿಹೊತ್ರದಷ್ಟೇ ಫಲ ಕೊಡಲಿದೆ. ಡಾ. ಜೀವನ್‌ಕುಮಾರ್, ಘಾಟಿ ರಾಷ್ಟ್ರೋತ್ಥಾನ ಗೋಶಾಲೆ ಮುಖ್ಯಸ್ಥ ಯಾವುದೇ ರೈತರು ಗೋಶಾಲೆಗೆ ಬಂದರೆ ಸಗಣಿ ದೀಪ ತಯಾರಿಸುವ ವಿಧಾನ ಕಲಿಸಿಕೊಡುತ್ತೇವೆ. ಇದರ ಪ್ರಯೋಜನ ಪಡೆದು ಪ್ರತಿ ತಿಂಗಳು 15 ಸಾವಿರ ರೂ.ವರೆಗೆ ಹೆಚ್ಚುವರಿ ಆದಾಯ ಪಡೆಯಬಹುದು. ಆರ್. ರಾಮಚಂದ್ರ, ಗೋ ವಿಭಾಗದ ಮುಖ್ಯಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net