ಸಣ್ಣ ಬೇಸಿಗೆ ಮಳೆಗೆ ರಾಜಧಾನಿಯ ಹಲವೆಡೆ ಅವಾಂತರ:ಮರ ಬಿದ್ದು ಕಾರುಗಳು ಜಖಂ

rain
Published on

ಬೆಂಗಳೂರು: ಪ್ರತಿನಿತ್ಯ ಧೂಳಿನ ಮಜ್ಜನಗೆ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು, ಮಳೆ ನೀರು ತುಂಬಿದ ರಸ್ತೆ ಗುಂಡಿಗಳಲ್ಲಿ ವಾಹನ ಚಲಾಯಿಸುವ ಪರಿಸ್ಥಿತಿ ಗುರುವಾರ ನಿರ್ಮಾಣವಾಯಿತು.

ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ಸುರಿದ ಸಣ್ಣ ಪ್ರಮಾಣದ ಬೇಸಿಗೆ ಮಳೆಗೆ ನಗರದ ಹಲವೆಡೆ ಅವಾಂತರ ಸೃಷ್ಟಿಯಾಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಒಂದು ರೀತಿಯಲ್ಲಿ ಬೇಸಿಗೆಕಾಲದಲ್ಲಿಯೂ ಮಳೆಗಾಲದ ವಾತಾವರಣ ನಿರ್ಮಾಣವಾಯಿತು. ಮಧ್ಯಾಹ್ನ ವೇಳೆ ಅರ್ಧ ಗಂಟೆ ಸುರಿದ ಮಳೆಗೆ ಹಲವೆಡೆ ವಾಹನ ದಟ್ಟಣೆ ಉಂಟಾಯಿತು. ಕೆಲವೆಡೆ ಜೋರಾಗಿ ಸುರಿದರೆ, ಇನ್ನೂ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಬಿತ್ತು. ನಗರದ ಅನೇಕ ಕಡೆಗಳಲ್ಲಿ ವೈಟ್​ಟಾಪಿಂಗ್​ ಕಾಮಗಾರಿ ನಡೆಯುತ್ತಿದೆ. ಇನ್ನೂ ಹಲವೆಡೆ ಒಳಚರಂಡಿ ಪೈಪ್​ ಅಳವಡಿಕೆಗೆ ರಸ್ತೆಗಳನ್ನು ಅಗೆಯಲಾಗಿದ್ದು, ಆ ಜಾಗದಲ್ಲಿ ನೀರು ತುಂಬಿಕೊಂಡಿರುವುದು ಅಲ್ಲೆಲ್ಲಿ ಕಂಡುಬಂತು. ಕೆಲ ರಸ್ತೆ ಮೇಲೆ ಕಸ, ಪಾಸ್ಟಿಕ್​ ಸಹಿತ ಮಳೆ ನೀರು ಹರಿದು ಬರುತ್ತಿರುವ ಪರಿಣಾಮ ವಾಹನ ಸವಾರರು ಪರದಾಡಿದರು.

ಪಣತ್ತೂರು ಸೇತುವೆಯಿಂದ ಕಾಡುಬೀಸನಹಳ್ಳಿ ಕಡೆಗೆ, ಕಸ್ತೂರಿನಗರದಿಂದ ರಾಮಮೂರ್ತಿನಗರ ಕಡೆಗೆ, ದಾಲ್ಮೀಯಾ ಟು ವೆಗಾ ಸಿಟಿ ಮಾಲ್​, ಹಾರೋಹಳ್ಳಿ ಮುಖ್ಯರಸ್ತೆಯಿಂದ ವಿಷ್ಣುವರ್ಧನ ರಸ್ತೆ ಕಡೆಗೆ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಅಲ್ಲದೆ, ಎಚ್​ಎಎಲ್​ ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್​ ಕಡೆಗೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ 80 ಅಡಿ ರಸ್ತೆ ಕಡೆಗೆ ಹಾಗೂ ವಸಂತನಗರದ ಅಂಡರ್​ಪಾಸ್​, ಐಟಿಟಿ ಭವನದಿಂದ ಬಾಣಸವಾಡಿ ಸರ್ವಿಸ್​ ರಸ್ತೆ, ಹೆಬ್ಬಾಳ ರಸ್ತೆ, ಪುಟ್ಟೇನಹಳ್ಳಿ ಅಂಡರ್​ಪಾಸ್​, ಸಿಲ್ಕ್​ ಬೋರ್ಡ್​, ಕೆ.ಆರ್​.ಪುರ ರಸ್ತೆಯಲ್ಲಿ ನೀರು ತುಂಬಿದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

ಕಾರು ಜಖಂ: ರಾಜಾಜಿನಗರದ 2ನೇ ಬ್ಲಾಕ್​ನ 10ನೇ ಮುಖ್ಯರಸ್ತೆಯಲ್ಲಿ ಮಳೆಯಿಂದಾಗಿ ಬೃಹತ್​ ಗಾತ್ರದ ಮರ ಬಿದ್ದ ಪರಿಣಾಮ 4 ಕಾರು, ಬೈಕ್​ಗಳು ಜಖಂಗೊಂಡವು. ಅದೃಷ್ಟವಶಾತ್​ ಕಾರಿನಲ್ಲಿ ಯಾರು ಇಲ್ಲದ ಪರಿಣಾಮ ಪ್ರಾಣಹಾನಿ ಸಂಭವಿಸಲಿಲ್ಲ. ಬಿದ್ದ ಮರವನ್ನು ಪಾಲಿಕೆಯ ಅರಣ್ಯ ವಿಭಾಗದ ಸಿಬ್ಬಂದಿ ತೆರವುಗೊಳಿಸಿದರು. ಸಿಎಸ್​ಬಿ ಲೇಔಟ್​ನ 2ನೇ ಅಡ್ಡರಸ್ತೆಯಲ್ಲಿರುವ ನೆಲಮಹಡಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ಬಿರುಗಾಳಿ ಬೀಸಿದ ಪರಿಣಾಮ ನಗರದ ವಿವಿಧೆಡೆ ಕಂಬಗಳಿಗೆ ಹಾನಿಯಾಗಿ ವಿದ್ಯುತ್​ ಸಂಪರ್ಕ ಸ್ಥಗಿತವಾಯಿತು. ಬಿದ್ದ ಕಂಬಗಳನ್ನು ದುರಸ್ಥಿ ಮಾಡುವ ಕಾರ್ಯದಲ್ಲಿ ಬೆಸ್ಕಾಂ ಸಿಬ್ಬಂದಿ ತೊಡಗಿದ್ದರು. ಸರ್ಜಾಪುರ ಸುತ್ತಮುತ್ತ ರಸ್ತೆಗಳು ನೀರು ತಂಬಿತ್ತು. ಬಿಟಿಎಂ ಲೇಔಟ್​ನ ತಾವರಕೆರೆ ರಸ್ತೆ ಜಲಾವೃತವಾಗಿತ್ತು. ಮಹದೇವಪುರ ವಲಯದಲ್ಲೂ ಮಳೆಯಿಂದ ಅನಾಹುತ ಉಂಟಾಗಿತ್ತು.

ಎಲ್ಲೆಲ್ಲಿ ಎಷ್ಟು ಮಳೆ: ಕೋರಮಂಗಲ 39 ಮಿಮೀ, ಎಚ್​ಎಎಲ್​ ವಿಮಾನ ನಿಲ್ದಾಣ 31 ಮಿಮೀ, ಮಾರತ್ತಹಳ್ಳಿ 29 ಮಿಮೀ, ವಿದ್ಯಾಪಿಠ 28 ಮಿಮೀ, ವನ್ನರ್​ಪೇಟೆ 26 ಮಿಮೀ, ರಾಮಮೂರ್ತಿ ನಗರ 23 ಮಿಮೀ, ವಿಜ್ಞಾನನಗರ 22 ಮಿಮೀ, ಪುಲಿಕೇಶಿನಗರ 20 ಮಿಮೀ, ಹೊಯ್ಸಳ ನಗರ 19 ಮಿಮೀ, ಗರುಡಚಾರ್​ಪಾಳ್ಯ 19 ಮಿಮೀ, ಎಚ್​ಎಸ್​ಆರ್​ ಲೇಔಟ್​ 17 ಮಿಮೀ, ಕೆ.ಆರ್​.ಪುರ, ಬಿಟಿಎಂ ಲೇಔಟ್​, ಬೆಳಂದೂರು, ಪಟ್ಟಾಭಿರಾಮನಗರ 16 ಮಿಮೀ, ಬಾಣಸವಾಡಿ 14 ಮಿಮೀ, ಹೆಮ್ಮಿಗೇಪುರ, ದೊಡ್ಡನೆಕ್ಕುಂಡಿ, ಹೊರಮಾವು 12 ಮಿಮೀ, ಸಂಪಂಗಿರಾಮನಗರ, ನಂದಿನಿಲೇಔಟ್​ನಲ್ಲಿ 11 ಮಿಮೀ ಮಳೆಯಾಗಿದೆ.

3 ದಿನ ಮಳೆ:ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಕೆಲ ಬಡಾವಣೆಗಳಲ್ಲಿ ಮಳೆಗಿಂತ ರಭಸವಾಗಿ ಗಾಳಿ ಬೀಸಲಿದೆ. ಹೀಗಾಗಿ, ಒಣಗಿದ ಮರ, ಕೊಂಬೆ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net