

ಬಾಗೇಪಲ್ಲಿ: ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದ ಕಾರ್ಯನಿರ್ವಹಿಸದ ಹೈಮಾಸ್ಟ್ ದೀಪಗಳನ್ನು ದುರಸ್ತಿ ಮಾಡಿಸಿ ಕತ್ತಲೆಯಲ್ಲಿದ್ದ ಬಾಗೇಪಲ್ಲಿಯ ಮುಖ್ಯರಸ್ತೆಗಳನ್ನು ಬೆಳಗುವಂತೆ ಮಾಡಿದ ಪುರಸಭೆ ಆಡಳಿತದ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ನೇತಾಜಿ ಸರ್ಕಲ್, ಗೂಳೂರು ವೃತ್ತ, ಅಂಬೇಡ್ಕರ್ ಕಾಲನಿ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಮುಂಭಾಗ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪಗಳು, ಡಿವಿಜಿ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಶೇ.80 ಬೀದಿದೀಪಗಳು ನಿರ್ವಹಣೆಯಿಲ್ಲದೆ ಕೆಟ್ಟು ಹೋಗಿ ಎರಡು ವರ್ಷಗಳೇ ಕಳೆದಿತ್ತು. ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು ಸಲ್ಲಿಸಿದರೂ ದುರಸ್ತಿ ಭಾಗ್ಯ ಸಿಕ್ಕಿರಲಿಲ್ಲ. ಬೀದಿದೀಪಗಳ ಅಸಮರ್ಪಕ ನಿರ್ವಹಣೆ ಕುರಿತು ಈ ಹಿಂದಿನ ಹಾಗೂ ಹಾಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದಂತೆ ಬೀದಿದೀಪಗಳ ದುರಸ್ತಿ ಕಾರ್ಯಕ್ಕೆ ಒಪ್ಪಿಗೆ ಪಡೆದುಕೊಂಡಿರುವ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಅವರು ಪುರಸಭೆ ವ್ಯಾಪ್ತಿಯ ಹೈಮಾಸ್ಟ್ ದೀಪಗಳ ರಿಪೇರಿ ಮಾಡಿಸಿ ಹೈಮಾಸ್ಟ್ ದೀಪಗಳಿಗೆ ಹೊಸ ಸ್ಪರ್ಶ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
"ಪಟ್ಟಣದ ವ್ಯಾಪ್ತಿಯಲ್ಲಿರುವ ಹೈಮಾಸ್ಟ್ ದೀಪಗಳನ್ನು ದುರಸ್ತಿಗೊಳಿ ಸುವಂತೆ ಎರಡು ವರ್ಷಗಳಿಂದ ಪುರಸಭೆಗೆ ಮನವಿ ಸಲ್ಲಿಸಲಾಗಿತ್ತು, ಈ ಹಿಂದಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಬಗೆಹರಿದಿರಲಿಲ್ಲ. ಹಾಲಿ ಪುರಸಭೆ ಮುಖ್ಯಾಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿರುವುದು ಸ್ವಾಗತಾರ್ಹ." - ಬಿ.ಎ. ಬಾಬಾಜಾನ್ ಕರವೇ, ಬಾಗೇಪಲ್ಲಿ "ಒಂದು ವರ್ಷದಿಂದ ಬೀದಿದೀಪಗಳ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿದ್ದು, ವಿಶೇಷ ಅನುದಾನದಲ್ಲಿ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗಿದೆ. ಅದೇರೀತಿ ಸಮಸ್ಯಾತ್ಮಕ ವಾರ್ಡ್‌ಗಳಲ್ಲಿ ಹೊಸ ಪೈಪ್‌ಲೈನ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಎಲ್ಲರ ಸಹಕಾರದಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲಾಗಿದೆ." - ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ