ಆತ್ಮಕಥೆಗಳಿಂದ ಆಯಾ ಕಾಲಘಟ್ಟದ ಮೇಲೆ ಬೆಳಕು

01-02-Shiva-2
ರಾಯಚೂರಿನ ಕನ್ನಡ ಭವನದಲ್ಲಿ ಕಸಾಪದಿಂದ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ರಾಮಸ್ವಾಮಿ ನೂಲಿ ಉದ್ಘಾಟಿಸಿದರು. ಕರ್ನಾಟಕ ಪುಸ್ತಕ ಪ್ರಾಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಭಗತರಾಜ ನಿಜಾಮಕಾರಿ, ವೈದ್ಯ ಸುರೇಶ ಸಗರದ, ಆಂಜಿನಯ್ಯ ಕಾವಲಿ ಇದ್ದರು.
Published on

ರಾಯಚೂರು: ಆತ್ಮಕಥೆಗಳು ಕೇವಲ ಒಬ್ಬ ವ್ಯಕ್ತಿ, ಮಹಿಳೆಯರ ಬದುಕಿನ ಕಥೆ ಮಾತ್ರವಲ್ಲ. ಅವುಗಳಿಂದ ಆಯಾ ಕಾಲಘಟ್ಟದಲ್ಲಿನ ಸಾಮಾಜಿಕ, ಆರ್ಥಿಕ ಮುಂತಾದ ಆಯಾಮಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪುಸ್ತಕ ಪ್ರಾಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಹಿಳಾ ಸಂವೇದನೆಯ ಆತ್ಮಕಥೆಗಳಲ್ಲಿ ಸೋಲು, ಗೆಲುವುಗಳನ್ನು ಕಟ್ಟಿ ಕೊಡಲಾಗಿದೆ ಎಂದರು.
ಆತ್ಮಕಥನಗಳು ಮಹಿಳಾ ಸಂಕಟವನ್ನು ಅರಿಯುವಲ್ಲಿ ಬಹಳಷ್ಟು ಸಹಕಾರಿಯಾಗಿದ್ದು, ಅವರವರ ಕಾಲಘಟ್ಟದಲ್ಲಿನ ಪರಿಸರ, ಕುಟುಂಬ, ವ್ಯಕ್ತಿತ್ವ, ಸಮಾಜದಲ್ಲಿನ ಕಟ್ಟುಪಾಡುಗಳನ್ನು ಆತ್ಮಕಥೆಯಲ್ಲಿ ಕಾಣಬಹುದಾಗಿದೆ. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಆತ್ಮಕಥೆಗಳ ಕೊಡುಗೆ ಮಹತ್ವದ್ದಾಗಿದೆ.
ಸಾಹಿತ್ಯ, ಬದುಕು ಒಂದಾಗಿ ಸಾಗಬೇಕಾಗಿದ್ದು, ಓದುವವರಿಲ್ಲದೆ, ಪುಸ್ತಕ ಖರೀದಿ ಮಾಡುವವರು ಇಲ್ಲದಿದ್ದರೆ ಸಾಹಿತ್ಯ ಜನರಿಗೆ ಮುಟ್ಟಲು ಸಾಧ್ಯವಿಲ್ಲ. ಪ್ರಾಕಾರದ ಅಧ್ಯಕ್ಷೆಯಾಗಿದ್ದಾಗ ಈ ಭಾಗದ ಸಾಹಿತಿಗಳ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊರತಲು ಪ್ರಯತ್ನಿಸಿದ್ದೇನೆ ಎಂದು ಡಾ.ವಸುಂಧರಾ ಭೂಪತಿ ತಿಳಿಸಿದರು.
ಹಿರಿಯ ಸಾಹಿತಿ ರಾಮಸ್ವಾಮಿ ನೂಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನುಭವವೇ ಸಾಹಿತ್ಯವಾಗಿದ್ದು, ಶರಣರು ತಮ್ಮ ಅನುಭವಗಳಿಗೆ ಅಕ್ಷರ ರೂಪ ನೀಡುವ ಮೂಲಕ ವಚನಗಳನ್ನಾಗಿಸಿದರು. ಅನಕ್ಷರಸ್ಥರಾಗಿದ್ದ ಶರಣರು ಅಷ್ಟೊಂದು ವಚನಗಳನ್ನು ಬರೆದರು ಎನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಸಾಹಿತ್ಯವನ್ನು ಬರೆದವರ ವ್ಯಕ್ತಿ, ರೂಪವನ್ನು ನೋಡಿ ಓದಬಾರದು. ಅವರ ಸಾಹಿತ್ಯದಲ್ಲಿನ ಸತ್ವ, ವೌಲ್ಯಗಳನ್ನು ಅರಿತುಕೊಂಡು ಓದಿದಾಗ ಮಾತ್ರ ಅದರಲ್ಲಿರುವ ಮಧುರ ಗುಣಗಳನ್ನು ಅರಿಯಲು ಸಾಧ್ಯವಾಗಲಿದೆ. ಸಾಹಿತ್ಯದ ಓದು ಇನ್ನೂ ಹೆಚ್ಚಾಗಬೇಕಾಗಿದೆ ಎಂದರು.
ದತ್ತಿ ದಾನಿ ಭರತರಾಜ ನಿಜಾಮಕಾರಿ ಮಾತನಾಡಿ, ಎಲ್ಲರ ಬದುಕಿನ ಸಾಧನೆಯಿ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಮಹಿಳೆ ಹಿಂದೆ ನಿಂತು ಪ್ರೋತ್ಸಾಹಿಸಿದಾಗ ಸಾಹಿತಿ ಉತ್ತಮ ಕೃತಿಗಳನ್ನು ನೀಡಲು ಸಾಧ್ಯವಾಗಲಿದೆ. ನನ್ನ ಬೆನ್ನ ಹಿಂದೆ ನಿಂತು ಹೆಂಡತಿ ಪ್ರೋತ್ಸಾಹ ನೀಡಿದ್ದರಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿ ಅಯ್ಯಪ್ಪಯ್ಯ ಹುಡಾ, ವೈದ್ಯ ಡಾ.ಸುರೇಶ ಸಗರದ, ಕಸಾಪ ತಾಲೂಕು ಕಾರ್ಯದರ್ಶಿ ಆಂಜಿನಯ್ಯ ಕಾವಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net